ಮಂಗಳೂರು: ‘ಕಾಂತಾರ ಚಾಪ್ಟರ್ 1’ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ, ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ನೇಮೋತ್ಸವದ ವೇಳೆ ನಟ ರಿಷಬ್ ಶೆಟ್ಟಿಯ ಮಡಿಲಲ್ಲಿ ದೈವ ನರ್ತಕರು ಮಲಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.
ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಹರಕೆ ನೇಮೋತ್ಸವವು ಸಂಪ್ರದಾಯಬದ್ಧವಾಗಿ ಪ್ರಾರಂಭವಾಯಿತು. ನೇಮ ಆರಂಭಕ್ಕೂ ಮುನ್ನ ದೈವ ಎಣ್ಣೆಬೂಳ್ಯ ಸಲ್ಲಿಸುವ ಸಂಪ್ರದಾಯದ ವೇಳೆ ಈ ಘಟನೆ ನಡೆದಿದೆ. ರಿಷಬ್ ಶೆಟ್ಟಿಯ ಇಬ್ಬರೂ ಕಾಂತಾರ ಸಿನಿಮಾಗಳಿಗೆ ಮಾರ್ಗದರ್ಶನ ನೀಡಿದ್ದವರೇ ಈ ಬಾರಿ ದೈವ ನರ್ತಕರಾಗಿದ್ದರು.
ದೈವ ನರ್ತಕರು ರಿಷಬ್ ಶೆಟ್ಟಿಯ ಮಡಿಲಲ್ಲಿ ಮಲಗಿದ ಕ್ಷಣ ಭಾವುಕವಾಗಿದ್ದರೂ, ಇದು ತುಳುನಾಡಿನ ದೈವಾರಾಧನೆ ಸಂಪ್ರದಾಯಕ್ಕೆ ವಿರೋಧವಾಗಿದೆ ಎಂಬ ಆಕ್ಷೇಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ದೈವಕುಲದ ಕಟ್ಟಳೆಗಳಲ್ಲಿ ಈ ರೀತಿಯ ವರ್ತನೆಗೆ ಅವಕಾಶವಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರ-ವಿರೋಧ ಅಭಿಪ್ರಾಯಗಳ ನಡುವೆ ಈ ಘಟನೆ ಇದೀಗ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಕಾಂತಾರ ಸಿನಿಮಾಗಳಿಗೆ ಇವರೇ ಮಾರ್ಗದರ್ಶಕರಾಗಿದ್ದು, ಸೈಮಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲೂ ಇವರೇ ಭಾಗವಹಿಸಿದ್ದನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಆದರೂ ಸಂಪ್ರದಾಯ ಉಲ್ಲಂಘನೆಯ ಆರೋಪದ ನಡುವೆ ಈಗ ದೈವ ನರ್ತಕರ ಈ ನಡೆ ಪ್ರಸ್ತುತ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದೆ.



