ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಕೊಟ್ಟೂರುಸ್ವಾಮಿ ಐಟಿಐಯಲ್ಲಿ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಬಸವೇಶ ಜೋಳದ, ನೀವು ಕಲಿತ ವಿದ್ಯೆಯನ್ನು ಸಮಾಜಕ್ಕೆ ಸಮರ್ಪಕವಾಗಿ ಉಪಯೋಗಿಸಿ. ನಿಮ್ಮಲ್ಲಿನ ಕೌಶಲ್ಯವನ್ನು ತೋರುವ ಮೂಲಕ ಉತ್ತಮ ತಂತ್ರಜ್ಞರು ಎಂಬುದನ್ನು ಸಾಬೀತುಪಡಿಸಿ. ಇಲ್ಲಿ ಕಲಿತ ವಿದ್ಯೆಯಷ್ಟೇ ನಿಮಗೆ ಸಾಲದು. ನಿಮ್ಮದೇ ಆದ ಶೈಲಿಯನ್ನು ಬಳಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯಿರಿ ಎಂದರು.
ಐಟಿಐ ಕಲಿತ ವಿದ್ಯಾರ್ಥಿಗಳಿಗೆ ಈಗ ವಿಫುಲ್ ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನೀವು ನಿಮ್ಮ ಸಾಮರ್ಥ್ಯವನ್ನು, ಕೌಶಲ್ಯವನ್ನು ಸಾಬೀತುಪಡಿಸುತ್ತ ಹೋದಂತೆ ನಿಮ್ಮ ವೇತನದಲ್ಲಿಯೂ ಹೆಚ್ಚಳವಾಗಿ ನೀವೊಬ್ಬ ಉತ್ತಮ ತಂತ್ರಜ್ಞ ಎಂಬ ಹೆಸರನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.
ಉಪನ್ಯಾಸಕ ಶ್ರೀಧರ ಕಮ್ಮಾರ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿಯೂ ತಂತ್ರಜ್ಞರ ಕೌಶಲ್ಯತೆ ಬರಲಿ ಎಂದು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇಂದು ತಮ್ಮ 32ನೇ ಜನ್ಮೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಇಂದಿನ ಪೀಠಾಧಿಪತಿಗಳಾದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ತಮ್ಮ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತ, ಈ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅವರೀರ್ವರ ಸದಾಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುವುದರಿಂದ ನೀವು ಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತೀರಿ ಎಂದು ಆಶಿಸಿದರು.
ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆಲ್ಲ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಡಿ.ಎ. ಪಾಟೀಲ ಸ್ವಾಗತಿಸಿದರು. ನಾಗರಾಜ ಗುಡದಾರಿ ವಂದಿಸಿದರು.



