ಸಹಕಾರಿ ಸಂಘಗಳು ರೈತರ ಹಿತಕ್ಕಾಗಿ ದುಡಿಯುತ್ತಿವೆ: ಮಿಥುನ ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರತಿ ಗ್ರಾಮದಲ್ಲಿರುವ ಕೃಷಿ ಉತ್ಪನ್ನ ಸಹಕಾರಿ ಸಂಘಗಳು ರೈತರ ಹಿತಕ್ಕಾಗಿ ದುಡಿಯುತ್ತಿವೆ. ಇವುಗಳ ಸಹಕಾರದಿಂದ ರೈತರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ ಎಂದು ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು.

Advertisement

ಸಮೀಪದ ಹಾಲಕೆರೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳು ಸಮರ್ಪಕವಾಗಿ ನಡೆಯಲು ಸರಕಾರದ ಸಹಾಯಹಸ್ತ ಅವಶ್ಯಕವಿದೆ. ಗ್ರಾಮಗಳ ಸಹಕಾರಿ ಸಂಘಗಳನ್ನು ಇನ್ನೂ ಉತ್ತಮ ದರಜೆಗೆರಿಸಲು ಸರಕಾರವು ಎಲ್ಲ ಸಂಘಗಳಿಗೆ ಅನುದಾನ ರೂಪದಲ್ಲಿ ಹಣಕಾಸಿನ ವ್ಯವಸ್ಥೆಯನ್ನು ಒದಗಿಸಿಕೊಡಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ ಮಾತನಾಡಿ, ಇಂದಿನ ದಿನಗಳಲ್ಲಿ ಸಹಕಾರಿ ಸಂಘಗಳು ಅತ್ಯಂತ ತೊಂದರೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರೈತರಿಗೆ ಐದು ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡಬೇಕೆಂದರೂ ನಮ್ಮ ಬಳಿಯಲ್ಲಿ ಅಷ್ಟೊಂದು ಹಣಕಾಸಿನ ಅನುಕೂಲವಿಲ್ಲ. ನಮ್ಮ ಸಿಬ್ಬಂದಿಯವರಿಗೂ ನಾವು ತಿಂಗಳ ಸಂಬಳ ನೀಡಲು ಹೆಣಗಾಡುತ್ತಿದ್ದೇವೆ. ಇಂತಹ ಬೆಲೆಯೇರಿಕೆ ದಿನಗಳಲ್ಲಿ ಅವರು ಜೀವನ ನಡೆಸುವುದಾದರೂ ಹೇಗೆ? ಇದನ್ನೆಲ್ಲ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ಸಿಬ್ಬಂದಿ ವೇತನಕ್ಕಾದರೂ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಬೇಕೆಂದು ಕೇಳಿದರು.

ಸಹಕಾರಿ ಸಂಘಗಳಿಂದ ಸರಕಾರಕ್ಕೆ ಸಹಕಾರವೇನೋ ಬೇಕು. ಆದರೆ ಸಹಕಾರಿ ಸಂಘಗಳು ಅಸ್ತಿತ್ವದಲ್ಲಿರುವಂತೆ ಅವುಗಳಿಗೆ ಹಣಕಾಸಿನ ಸಹಾಯ ನೀಡಬೇಕೆಂಬ ಯೋಚನೆ ಸರಕಾರಕ್ಕೆ ಬರುತ್ತಿಲ್ಲ. ನಮ್ಮ ಸಿಬ್ಬಂದಿಯವರು ಹಗಲಿರುಳೆನ್ನದೆ ಕಾರ್ಯ ನಿರ್ವಹಿಸುತ್ತಾರೆ. ಸರಕಾರ ಅವರ ಜೀವನಕ್ಕೊಂದು ಆಧಾರ ಮಾಡಬೇಕೆಂದು ಸರಕಾರಕ್ಕೆ ತಾವು ಆಗ್ರಹಿಸುವುದಾಗಿ ಹೇಳಿದ ಪಾಟೀಲ, ಬರೀ ಭಾಷಣಗಳಿಂದ, ಸಹಕಾರಿ ಸಪ್ತಾಹದ ಆಚರಣೆಗಳಿಂದ ಈ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂಬುದು ಮನವರಿಕೆಯಾಗಿದೆ. ಆದ್ದರಿಂದ ಹೋರಾಟವೊಂದೇ ಇದಕ್ಕೆ ದಾರಿ ಎಂದರು.

ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಮಾತನಾಡಿ, ಸಹಕಾರಿ ಸಂಘಗಳ ನೋವಿನ ಅರಿವು ನಮಗಿದೆ. ನಿಮ್ಮ ತೊಂದರೆಯನ್ನು ಸರಕಾರದ ಗಮನಕ್ಕೆ ತಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸುರೇಶಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ರಮೇಶ ಪಲ್ಲೇದ, ಹಾಲಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಹೊಕ್ಕಳದ, ಗದಗ ಸಹકારી ಸಂಘಗಳ ನಿಬಂಧಕಿ ಪುಷ್ಪಾ ಕಡಿವಾಳ, ಲೆಕ್ಕ ಪರಿಶೋಧನಾ ಇಲಾಖೆಯ ಪಿ.ಎಲ್. ಹಳೇಮನಿ, ಕೆಸಿಸಿ ಬ್ಯಾಂಕಿನ ಜಿಲ್ಲಾ ನಿಯಂತ್ರಣ ಅಧಿಕಾರಿ ಎಸ್.ಎಂ. ಚಿಕ್ಕಮಠ, ಬ್ಯಾಂಕ್ ನಿರೀಕ್ಷಕರು, ವಿಸ್ತೀರ್ಣ ಅಧಿಕಾರಿ ಜಿ.ಸಿ. ನಾಗಲೋಟಿಮಠ, ಮಲ್ಲಿಕಾರ್ಜುನ ಉಣಚಗೇರಿ, ಮಲ್ಲಪ್ಪ ಪ್ರಭಣ್ಣವರ, ಉಮಾದೇವಿ ಅಂಗಡಿ ಮುಂತಾದವರು ಉಪಸ್ಥಿತರಿದ್ದರು. ವಿ.ಎಸ್. ನವಲಗುಂದ ಸ್ವಾಗತಿಸಿದರು. ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿದರು.

ಸಹಕಾರಿ ಸಂಘಗಳಿಂದ ಸರಕಾರಕ್ಕೆ ಸಹಕಾರವೇನೋ ಬೇಕು. ಆದರೆ ಸಹಕಾರಿ ಸಂಘಗಳು ಅಸ್ತಿತ್ವದಲ್ಲಿರುವಂತೆ ಅವುಗಳಿಗೆ ಹಣಕಾಸಿನ ಸಹಾಯ ನೀಡಬೇಕೆಂಬ ಯೋಚನೆ ಸರಕಾರಕ್ಕೆ ಬರುತ್ತಿಲ್ಲ. ನಮ್ಮ ಸಿಬ್ಬಂದಿಯವರು ಹಗಲಿರುಳೆನ್ನದೆ ಕಾರ್ಯ ನಿರ್ವಹಿಸುತ್ತಾರೆ. ಸರಕಾರ ಅವರ ಜೀವನಕ್ಕೊಂದು ಆಧಾರ ಮಾಡಬೇಕೆಂದು ಸರಕಾರಕ್ಕೆ ತಾವು ಆಗ್ರಹಿಸುವುದಾಗಿ ಹೇಳಿದ ಪಾಟೀಲ, ಬರೀ ಭಾಷಣಗಳಿಂದ, ಸಹಕಾರಿ ಸಪ್ತಾಹದ ಆಚರಣೆಗಳಿಂದ ಈ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂಬುದು ಮನವರಿಕೆಯಾಗಿದೆ. ಆದ್ದರಿಂದ ಹೋರಾಟವೊಂದೇ ಇದಕ್ಕೆ ದಾರಿ ಎಂದು ಅಂದಾನಗೌಡ ಪಾಟೀಲ ಅಭಿಪ್ರಾಯ ಪಟ್ಟರು.

 


Spread the love

LEAVE A REPLY

Please enter your comment!
Please enter your name here