ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರವು 2025ನೇ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದ್ದು, ಅದರ ಧ್ಯೇಯ ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು ಎಂದಾಗಿದೆ. ಇಂದು ಆಯೋಜಿಸಿರುವ ಏಕ್ ದಿನ್ ಏಕ್ ಘಂಟಾ ಏಕ್ ಸಾಥ್’ ಶ್ರಮದಾನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರು ಹೇಳಿದರು.
ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ. ಬ್ಯಾಂಕ್ ಧಾರವಾಡ, ಕೆ.ಎಂ.ಎಫ್ ಧಾರವಾಡ ಹಾಗೂ ಗದಗ ಜಿಲ್ಲೆಯ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ–2025ರ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಏಕ್ ದಿನ್ ಏಕ್ ಘಂಟಾ ಏಕ್ ಸಾಥ್’ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ ಮಾತನಾಡಿ, ಸಹಕಾರದಿಂದ ಸ್ವಚ್ಛತಾ ಅಭಿಯಾನ ಜೂನ್ ತಿಂಗಳಲ್ಲಿ ಪ್ರಾರಂಭಗೊಂಡು `ಏಕ್ ಪೇಡ್ ಮಾ ಕಿ ನಾಮ್‌ಸೇ’ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಜರುಗಿಸಲಾಗಿದೆ. ಅಂತೆಯೇ ಜಿಲ್ಲೆಯಲ್ಲಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಹೇಳಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿ ರಶಿದಾಬಾನು ಸಿ. ಯಲಿಗಾರ ವಂದಿಸಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಎಸ್.ಕೆ. ಕುರಡಗಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪುಷ್ಪಾ ಕಡಿವಾಳ, ಗದಗ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶಾಂತಾ ಎಚ್.ಎಂ., ಕೆ.ಸಿ.ಸಿ. ಬ್ಯಾಂಕ್‌ನ ಪ್ರಭಾರ ಜಿಲ್ಲಾ ನಿಯಂತ್ರಣಾಧಿಕಾರಿ ಎಸ್.ವಿ. ಚಳಗೇರಿ, ಮರ್ಚಂಟ್ಸ್ ಲಿಬರಲ್ ಕೋ–ಆಪ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರಾಜು ಕೋಟಿ, ಮರ್ಚಂಟ್ಸ್ ಅರ್ಬನ್ ಕೋ–ಆಪ್ ಬ್ಯಾಂಕ್‌ನ ಗದಗ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಾಯಕವಾಡಿ ಹಾಗೂ ಬ್ಯಾಂಕಿನ ಸಿಬ್ಬಂದಿಗಳು, ಸಹಕಾರ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ದೇಶ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ನಮ್ಮ ಹಳ್ಳಿಗಳಿಂದ ಸ್ವಚ್ಛತೆ ಪ್ರಾರಂಭವಾಗಿದೆ. ನಮ್ಮ ಮನೆಯನ್ನು ಹೇಗೆ ನಾವು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೇ ನಮ್ಮ ಸಮಾಜ ಹಾಗೂ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.



