ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಮತಕ್ಷೇತ್ರಕ್ಕೆ ಸಂಬಂಧಿಸಿ ಇದುವರೆಗೂ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ರೋಣ ಪುರಸಭೆ ಆಶ್ರಯ ಸಮಿತಿ ಸದಸ್ಯ ಅರ್ಜುನ ಕೊಪ್ಪಳ ಆಗ್ರಹಿಸಿದರು.
ಅವರು ಮಂಗಳವಾರ ಪಟ್ಟಣದ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶಾಸಕ ಜಿ.ಎಸ್. ಪಾಟೀಲರು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಮುಖ್ಯವಾಗಿ ಕನ್ನಡ ನಾಡಿನ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದು, ಅವರ ಸಂಪೂರ್ಣ ಕುಟುಂಬ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತು ಪಕ್ಷದ ಬಲವರ್ಧನೆಗೆ ಕಾರಣರಾಗಿದ್ದಾರೆ. ಹೀಗಾಗಿ ಪಕ್ಷ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಮುಖಂಡ ಮುತ್ತಪ್ಪ ಕೊಪ್ಪದ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರು ತಿಳಿಸಿರುವ ಕಾರ್ಯಗಳನ್ನು ಶಾಸಕ ಜಿ.ಎಸ್. ಪಾಟೀಲರು ಪಾಲಿಸಿಕೊಂಡು ಬಂದಿದ್ದು ಇತಿಹಾಸವಾಗಿದೆ. ಇದನ್ನು ಪಕ್ಷದ ವರಿಷ್ಠರು ಅರಿಯಬೇಕು. ಮುಖ್ಯವಾಗಿ ರೋಣ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎನ್ನುವುದು ನಮ್ಮೆಲ್ಲರ ಭಾವನೆ. ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಜೊತೆಗೆ ಮತಕ್ಷೇತ್ರಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ಸಾಬ ಹೊಸಮನಿ, ರೇವಣಪ್ಪ ಗದಗಿನ, ರಾಮಪ್ಪ ಕುರಿ, ಅಶೋಕ ಕೊಪ್ಪದ, ಬಸವರಾಜ ಮುಗಳಿ, ಹುಚ್ಚೀರಪ್ಪ ಗದಗಿನ, ಅಂದಪ್ಪ ಗಡಗಿ, ಶಶಿಧರ ಕೊಪ್ಪದ, ಕರೀಮಸಾಬ ಬಸರಕೋಡ, ಶಿದ್ದಪ್ಪ ಕೊಪ್ಪದ, ವೀರಭದ್ರಪ್ಪ ಕೊಪ್ಪದ, ಶರಣಪ್ಪ ಕೊಪ್ಪದ, ವಿ.ವೈ. ಕೊಪ್ಪದ, ಬಸವರಾಜ ಕುಂಬಾರ, ಬಸವರಾಜ ಮುಗುಳಿ, ಅಶೋಕ ಗಡಗಿ, ಮಲ್ಲಿಕಾರ್ಜುನ ಮುಗುಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



