ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಪೊಲೀಸರೇ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನಡೆದ ಸುಮಾರು ₹7 ಕೋಟಿ ದರೋಡೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಖಾಕಿಯ ಪಾತ್ರ ಬೆಳಕಿಗೆ ಬಂದಿತ್ತು. ಇದರ ನಡುವೆಯೇ ಪೊಲೀಸ್ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿಬರುತ್ತಿವೆ.
ಬಿಜೆಪಿ ನಾಯಕ ಹಾಗೂ ಮಾಜಿ IPS ಅಧಿಕಾರಿ ಭಾಸ್ಕರ್ ರಾವ್ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಮಾಡಿದ ಪೋಸ್ಟ್ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ತಮ್ಮ ಪೋಸ್ಟ್ನಲ್ಲಿ ಗೃಹ ಸಚಿವರನ್ನು ಉಲ್ಲೇಖಿಸಿ ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಕಚೇರಿಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. ಆದರೆ ಅನೇಕ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ ಎಂದು ಅವರು ಹೇಳಿದ್ದಾರೆ. ಒಂದು ಪೊಲೀಸ್ ಠಾಣೆಯಲ್ಲಿನ ಖಾಲಿ ಹುದ್ದೆಗೆ ₹55 ಲಕ್ಷ ಹಣದ ಬೇಡಿಕೆ ಇಡಲಾಗಿತ್ತು ಎಂದು ಭಾಸ್ಕರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ ತಮ್ಮ ಅಭ್ಯರ್ಥಿಗೆ ಆ ಮೊತ್ತವನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ನಂತರ ಮಧ್ಯವರ್ತಿಯ ಮೂಲಕ ಕಚೇರಿ ಹುದ್ದೆ ನೀಡುವಂತೆ ಮನವಿ ಮಾಡಲಾಗಿದ್ದು,
ಆರಂಭದಲ್ಲಿ ₹3 ಲಕ್ಷ ಕೇಳಲಾಗಿತ್ತು. ಅಂತಿಮವಾಗಿ ₹1 ಲಕ್ಷಕ್ಕೆ ವ್ಯವಹಾರ ನಿಶ್ಚಯವಾಯಿತು ಎಂದು ಅವರು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಮಾಜಿ IPS ಅಧಿಕಾರಿ ಮಾಡಿದ ಈ ಗಂಭೀರ ಆರೋಪಗಳು ಇದೀಗ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ ಅಥವಾ ತನಿಖೆ ನಡೆಯುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.



