ಬೆಂಗಳೂರು:- ನಿನ್ನೆ ಅಂದ್ರೆ ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಎಡವಟ್ಟು ಮಾಡಿಕೊಂಡಿದ್ದರು. ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಎಂಬ ಹೇಳಿಕೆ ಕೊಟ್ಟು ವಿಪಕ್ಷಕ್ಕೆ ಆಹಾರವಾಗಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವಿಪಕ್ಷ ಕಾಂಗ್ರೆಸ್ ವಿರುದ್ಧ ಮುಗಿಬೀಳುತ್ತಿದೆ.
ಹೌದು, ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಎಂದು ರಾಜ್ಯ ಸರ್ಕಾರವನ್ನೇ ಭ್ರಷ್ಟ ಸರ್ಕಾರ ಎಂದು ಟೀಕಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗುರಿಯಾಗಿದ್ದರು. ಈ ಹೇಳಿಕೆಯನ್ನೇ ಗುರಿಯಾಗಿಸಿಕೊಂಡ ವಿಪಕ್ಷ, ಕಾಂಗ್ರೆಸ್ ಒಂದು ಭ್ರಷ್ಟಾಚಾರ ಸರ್ಕಾರ ಎಂದು ಆಕ್ರೋಶ ಹೊರ ಹಾಕುತ್ತಿದೆ.
ಇದರ ಬೆನ್ನಲ್ಲೇ ತಮ್ಮ ಹೇಳಿಕೆಗೆ ಬಸವರಾಜ್ ರಾಯರೆಡ್ಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿನ್ನೆ ದಿನ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಮ್ಮ ಸರ್ಕಾರದಲ್ಲಿ ಡಾ. ನಂಜುಂಡಪ್ಪ ವರದಿಯ ಅನುಷ್ಠಾನ ಆದ ಮೇಲೆ ಏನೆಲ್ಲಾ ಆಗಿದೆ ಎಂದು ಹೇಳಿದ್ದೆ. ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಗುಣಮಟ್ಟ ಆಗ್ತಿದೆ ಅಂತಾ ಹೇಳಿದೆ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಅಂತಾ ಹೇಳಿದ್ದೇನೆ. ಈ ವ್ಯವಸ್ಥೆ ಸರಿಯಲ್ಲ, ಸರಿಯಾಗಿ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಯರಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ದೃಷ್ಟಿಯಿಂದ ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿದ್ದೇನೆ. ಯಾವ ಪಕ್ಷದ ವಿರುದ್ಧವೂ ನಾನು ಮಾತನಾಡಿಲ್ಲ. ಕರ್ನಾಟಕದಲ್ಲಿ ಈ ಬಗ್ಗೆ ಚರ್ಚೆಯಾಗಲಿ. ಭ್ರಷ್ಟಾಚಾರ ವ್ಯವಸ್ಥೆ ತಡೆಗಟ್ಟಲು ಮುಖ್ಯಮಂತ್ರಿಗಳು ದಿಟ್ಟವಾದ ಹೆಜ್ಜೆ ಇಟ್ಟಿದ್ದಾರೆ. ಈಗಿನ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ ಅಂತ ಹೇಳಲ್ಲ ಎಂದರು.
ನಾನು ಆತ್ಮವಂಚನೆ ಮಾಡಿಕೊಂಡು ಇಂದು ಪ್ರತಿಕ್ರಿಯೆ ನೀಡುತ್ತಿಲ್ಲ. ಮುಡಾದಲ್ಲಿ ಸಿಎಂ ತಪ್ಪಿಲ್ಲ, ಆರೋಪ ಬಂದಿದ್ದಕ್ಕೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನನ್ನ ಸ್ನೇಹಿತರು, ಮುಕ್ತವಾಗಿ ಮುಖ್ಯಮಂತ್ರಿಗಳನ್ನು ಬೆಂಬಲಿಸುತ್ತೇನೆ ಎಂದರು.