ವಿಜಯಪುರ: ನಗರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಸೀತಾರಾಮ್ ಲಮಾಣಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಠಾಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಮೂಹಿಕ ದಯಾಮರಣ ಕೋರಿ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.
ಪತ್ರದಲ್ಲಿ, ಪಿಎಸ್‌ಐ ಲಮಾಣಿ ಭ್ರಷ್ಟಾಚಾರ ಹಾಗೂ ಕಿರುಕುಳದಿಂದ ಸಿಬ್ಬಂದಿಗೆ ತೀವ್ರ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರ್ಶನಗರ ಠಾಣೆಯಿಂದ ತಿಕೋಟ ಠಾಣೆಗೆ ವರ್ಗಾವಣೆಗಾಗಿ ಹಣ ಸಂಗ್ರಹಿಸಲು ಅವರು ವಿಪರೀತವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್ ಹಾಗೂ ದೂರುದಾರರಿಂದ ₹10,000 ರಿಂದ ₹1 ಲಕ್ಷದವರೆಗೆ ಹಣ ವಸೂಲಿ ಮಾಡುವಂತೆ ಸಿಬ್ಬಂದಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕಾಗಿ ‘5.0’ ಎಂದರೆ ₹50,000 ಎಂಬ ಕೋಡ್ ಬಳಸಿ ಹಣ ವಸೂಲಿ ಮಾಡಲು ಸೂಚಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇದರ ಜೊತೆಗೆ ಬಾರ್, ಸ್ಪಾ, ಸಿಗರೇಟ್, ಮಾವಾ (ತಂಬಾಕು) ಹಾಗೂ ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಿಂದ ಹಣ ವಸೂಲಿ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ, ಗೃಹಸಚಿವ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಪ್ರಕರಣವು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.



