ಬೆಂಗಳೂರು: 2026–27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ 2026–27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಘೋಷಣೆಗಳ ನಿರೀಕ್ಷೆಯಿದೆ.
ಹಣಕಾಸು ಇಲಾಖೆ ಸಿದ್ಧಪಡಿಸಿರುವ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಜನಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಈ ಬಾರಿ ರಾಜ್ಯದ ಒಟ್ಟು ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂಪಾಯಿಗಳ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಸಾಲದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳ ನಿರ್ವಹಣೆ, ವಿವಿಧ ಇಲಾಖೆಗಳ ಅಭಿವೃದ್ಧಿ, ರೈತರ ಸಮಸ್ಯೆಗೆ ಪರಿಹಾರ, ಮಹಿಳೆಯರಿಗೆ ವಿಶೇಷ ಯೋಜನೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸೇರಿದಂತೆ ಹಲವು ಸವಾಲುಗಳ ನಡುವೆ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಯಾವ ರೀತಿಯ ಆದ್ಯತೆ ಸಿಗಲಿದೆ ಎಂಬುದನ್ನು ಕಾದುನೋಡುವಂತಾಗಿದೆ.



