ಬೆಂಗಳೂರು:- ದೀಪಾವಳಿಗೆ ಇನ್ನೇನೂ ದಿನಗಣನೆ ಶುರುವಾಗಿದ್ದು, ಈ ಹೊತ್ತಲ್ಲೇ ಪಟಾಕಿ ಮಾರುವವರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದೀಪಾವಳಿಯಲ್ಲಿ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಇದೆ. ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಭಾರ ಇರುವ, ಲೋಹ ಭರಿತ ಪಟಾಕಿ ಬಳಕೆ ಆಗುತ್ತಿದೆ. ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದೇನೆ. ಯಾವುದೇ ಹಸಿರು ಪಟಾಕಿ ಬಿಟ್ಟು ಬೇರೆಯದಕ್ಕೆ ಅವಕಾಶ ಕೊಡಬಾರದು. ಮಳಿಗೆಗಳಿಗೆ ಹೋಗಿ ಪರಿಶೀಲನೆ ಮಾಡಬೇಕು. ಪರಿಸರ ಸ್ನೇಹಿ ಪಟಾಕಿ ಮಾಡುತ್ತೇವೆ ಅಂತ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಯಾರಾದರೂ ನಿಯಮ ಉಲ್ಲಂಘನೆ ಮಾಡಿ ಪಟಾಕಿ ಮಾರಿದರೆ ಅವರ ಲೈಸೆನ್ಸ್ ರದ್ದು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಯವರು ಒಟ್ಟಾಗಿ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲು ಮನವಿ ಮಾಡುತ್ತೇನೆ. ಅಧಿಕಾರಿಗಳು ಪರಿಸರ, ಪ್ರಕೃತಿಯನ್ನ ಕಟ್ಟುನಿಟ್ಟಾಗಿ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ, ಪರಿಸರ ಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.