ಭಾರತ ಹಾಗೂ ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ ಇತ್ತೀಚೆಗೆ 2025 ರ ಐಪಿಎಲ್ ಅರ್ಧಕ್ಕೆ ನಿಂತಿತ್ತು. ಉಭಯ ದೇಶಗಳ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ ಮೇ 8 ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ ಬಿಸಿಸಿಐ, 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಿರುವುದಾಗಿ ಮೇ 9 ರಂದು ಘೋಷಿಸಿತ್ತು. ಆದರೀಗ ಎರಡೂ ದೇಶಗಳು ಕದನ ವಿರಾಮ ಘೋಷಿಸಿರುವ ಕಾರಣ ಇಂದಿನಿಂದ IPL ದ್ವಿತಿಯಾರ್ಧ ಪಂದ್ಯಗಳು ಶುರುವಾಗಲಿದೆ.
ಈಗಾಗಲೇ 57 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 17 ಮ್ಯಾಚ್ಗಳು ಮಾತ್ರ. ಈ ಹದಿನೇಳು ಪಂದ್ಯಗಳಲ್ಲಿ 13 ಲೀಗ್ ಮ್ಯಾಚ್ ಮಾತ್ರ ಬಾಕಿಯಿದೆ. ಈ ಹದಿಮೂರು ಪಂದ್ಯಗಳ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಫ್ ಆಡಲಿರುವ ನಾಲ್ಕು ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಸದ್ಯ 7 ತಂಡಗಳು ಪ್ಲೇಆಫ್ ರೇಸ್ನಲ್ಲಿದ್ದು, ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೇರಬಹುದು ಎಂದು ನೋಡುವುದಾದರೆ…
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ ಮುಂದಾಳತ್ವದ ಗುಜರಾತ್ ಟೈಟಾನ್ಸ್ ತಂಡವು 11 ಪಂದ್ಯಗಳಲ್ಲಿ 8 ರಲ್ಲಿ ಜಯ ಸಾಧಿಸಿದೆ. ಜಿಟಿ ಪಡೆಯು ಇನ್ನುಳಿದಿರುವುದು 3 ಮ್ಯಾಚ್ಗಳಲ್ಲಿ 1 ಜಯ ಸಾಧಿಸಿದರೆ 18 ಅಂಕಗಳನ್ನು ಪಡೆದು ಮುಂದಿನ ಹಂತಕ್ಕೇರಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಆರ್ಸಿಬಿ ತಂಡವು 11 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ 3 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಒಂದು ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ಗೇರಲಿದೆ.
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವ 3 ಮ್ಯಾಚ್ಗಳಲ್ಲಿ 2 ಗೆಲುವು ದಾಖಲಿಸಿದರೆ, 19 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಲಿದೆ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 12 ಪಂದ್ಯಗಳನ್ನಾಡಿದ್ದು, ಈ ವೇಳೆ 7 ಜಯ ಸಾಧಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರಬಹುದು.
ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 11 ಪಂದ್ಯಗಳನ್ನಾಡಿದ್ದು, ಈ ವೇಳೆ 6 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಮುಂದಿನ 3 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಅಂಕಗಳೊಂದಿಗೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿದ 11 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಸಾಧಿಸಿದರೆ, 16 ಅಂಕಗಳೊಂದಿಗೆ ಪ್ಲೇಆಫ್ನಲ್ಲಿ ಅವಕಾಶ ಸಿಗುವುದನ್ನು ಎದುರು ನೋಡಬಹುದು.
ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಕೆಕೆಆರ್ ತಂಡವು ಈವರೆಗೆ ಆಡಿದ 12 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದ 2 ಪಂದ್ಯಗಳಲ್ಲೂ ಜಯ ಸಾಧಿಸಿದರೆ 15 ಅಂಕಗಳೊಂದಿಗೆ ಟಾಪ್-4 ನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ತಂಡ 15 ಅಂಕಗಳನ್ನು ಪಡೆದರೆ ಮಾತ್ರ ಕೆಕೆಆರ್ಗೆ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೇರಲು ಅವಕಾಶ ಸಿಗಲಿದೆ.
ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ ಆಡಿದ 11 ಪಂದ್ಯಗಳನ್ನಾಡಿದ್ದು, ಈ ವೇಳೆ ಗೆದ್ದಿರುವುದು ಕೇವಲ 3 ಮ್ಯಾಚ್ ಮಾತ್ರ. ಇನ್ನುಳಿದ 3 ಪಂದ್ಯಗಳಲ್ಲಿ ಎಸ್ಆರ್ಹೆಚ್ ತಂಡ ಎಲ್ಲಾ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೂ ಪ್ಲೇಆಫ್ಗೇರಲು ಸಾಧ್ಯವಾಗುವುದಿಲ್ಲ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವು 12 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದೆ. ಆರ್ಆರ್ ತಂಡಕ್ಕೆ ಇನ್ನೂ 2 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೂ ಪ್ಲೇಆಫ್ಗೆ ಪ್ರವೇಶಿಸಲು ಅವಕಾಶವಿಲ್ಲ. ಅದರಂತೆ ಈಗಾಗಲೇ ಆರ್ಆರ್ ಪಡೆ ಐಪಿಎಲ್ 2025 ರಿಂದ ಹೊರಬಿದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ 12 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಸಿಎಸ್ಕೆ ತಂಡಕ್ಕೆ ಇನ್ನೂ 2 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೂ ಚೆನ್ನೈ ಪಡೆ ಪ್ಲೇಆಫ್ಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಎಸ್ಕೆ ಕೂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.