ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2026–27ನೇ ಸಾಲಿನ ರಾಜ್ಯದ ಆಯವ್ಯಯವನ್ನು ವಿಧಾನಸೌಧದಲ್ಲಿ ಮಂಡಿಸಲಿದ್ದಾರೆ.
ಬೆಳಿಗ್ಗೆ 10.15ಕ್ಕೆ ಆರಂಭವಾಗುವ ಈ ಆಯವ್ಯಯ ಮಂಡನೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ದಾಖಲೆಯ 17ನೇ ಆಯವ್ಯಯವಾಗಿರುವುದು ವಿಶೇಷವಾಗಿದೆ.
ಈ ಬಾರಿ ಆಯವ್ಯಯ ಮಂಡನೆಗೆ ಮತ್ತೊಂದು ವಿಶೇಷತೆಯೂ ಇದೆ. ರಾಜ್ಯದ ಜನತೆಗೆ ಆಯವ್ಯಯ ಭಾಷಣವನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದ ಹಲವು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾದ ಎಲ್‌ಇಡಿ ಹಾಗೂ ದೂರದರ್ಶನ ಪರದೆಗಳ ಮೂಲಕ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ವ್ಯವಸ್ಥೆಯನ್ನು ಕೈಗೊಂಡಿದ್ದು, ಇಂದು ಬೆಳಿಗ್ಗೆ 10.15ರಿಂದ ಆಯವ್ಯಯ ಭಾಷಣದ ನೇರ ಪ್ರಸಾರ ನಡೆಯಲಿದೆ. ಆಯವ್ಯಯ ಮಂಡನೆಯ ಬಳಿಕ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯೂ ಇದೇ ಪರದೆಗಳ ಮೂಲಕ ಪ್ರಸಾರವಾಗಲಿದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಾರಿ ಆಯವ್ಯಯ ಮಂಡನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಭಿಮಾನಿಗಳು ವಿಶಿಷ್ಟವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸುಮಾರು 8 ಸಾವಿರ ಚದರ ಅಡಿ ಪ್ರದೇಶದಲ್ಲಿ ಕಲಾವಿದ ಪುನೀತ್ ಅವರು ಬೃಹತ್ ರಂಗೋಲಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ರಚಿಸಿದ್ದಾರೆ.
ಕರ್ನಾಟಕದ ಭೂಪಟದ ಆಕೃತಿಯನ್ನು ಸೃಷ್ಟಿಸಿ ಅದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮುಂಗಡ ಪತ್ರವನ್ನು ಹಿಡಿದಿರುವ ರೀತಿಯಲ್ಲಿ ಚಿತ್ರಣ ಮೂಡಿಸಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಇಂದು ದಾಖಲೆ ಸೃಷ್ಟಿಸುವ ಆಯವ್ಯಯ ಮಂಡನೆ ನಡೆಯಲಿರುವ ಹಿನ್ನೆಲೆಯಲ್ಲಿ ತವರು ಜಿಲ್ಲೆಯಲ್ಲಿ ಅಭಿಮಾನಿಗಳು ಭರ್ಜರಿ ಬೆಂಬಲ ಸೂಚಿಸಿದ್ದಾರೆ.



