ಕೇಪ್ ಕೆನವೆರಲ್: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ದಲ್ಲಿ ಸಿಲುಕಿದ್ದ ಭಾರತ ಮೂಲದ ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಭೂಮಿಗೆ ಮರಳಲು ಕೌಂಟ್ ಡೌನ್ ಶುರುವಾಗಿದೆ. ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3 ಗಂಟೆಗೆ ಭೂಮಿಗೆ ಮರಳಲಿದ್ದು ಗಗನ ಯಾತ್ರಿಗಳನ್ನು ಸ್ವಾಗತಿಸಲು ಕೋಟ್ಯಾಂತರ ಅಭಿಮಾನಿಗಳು ಕಾದು ಕೂತಿದ್ದಾರೆ.
ಭಾರತೀಯ ಕಾಲಮಾನ ಇಂದು (ಮಂಗಳವಾರ) ಬೆಳಗ್ಗೆ 8.30ಕ್ಕೆ ಐಎಸ್‌ಎಸ್‌ನಿಂದ ನೌಕೆ ಹೊರಟ್ಟಿದ್ದು, ಬುಧವಾರ ಮುಂಜಾನೆ 3 ಗಂಟೆ ಫ್ಲೋರಿಡಾದ ಸಮುದ್ರದ ಮೇಲೆ ನೌಕೆಯು ಇಳಿಯಲಿದೆ. ಅಲ್ಲಿಂದ ವಿಶೇಷ ದೋಣಿಗಳ ಮೂಲಕ ಕರಾವಳಿಗೆ ಆಗಮಿಸಲಿದ್ದಾರೆ. ಇದರ ಸಂಪೂರ್ಣ ಪ್ರಕ್ರಿಯೆಯನ್ನು ನಾಸಾ ನೇರ ಪ್ರಸಾರ ಮಾಡಲಿದೆ. NASA ತನ್ನ ವೆಬ್ಸೈಟ್ನಲ್ಲಿ ನೇರ ಪ್ರಸಾರ ಮಾಡಲಿದೆ.
ಜೂನ್ 5, 2024 ರಂದು ಕೇವಲ ಎಂಟು ದಿನದ ಅದ್ಯಯನಕ್ಕೆಂದು ಬಾಹ್ಯಾಕಾಶಕ್ಕೆ ತೆರಳಿದ್ದ ವಿಲಿಯಮ್ಸ್ ಹಾಗೂ ವಿಲ್ಮೋರ್ ಅಲ್ಲಿಯೇ ಸಿಲುಕಿಕೊಂಡಿದ್ದರು. ಬೋಯಿಂಗ್ ಸ್ಟಾರ್ಲೈನರ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಬೇಕಾದ ಪರಿಸ್ಥಿತಿ ಬಂದಿತ್ತು. ಇದೀಗ ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸ್ಸಾಗುತ್ತಿದ್ದು ಇವರನ್ನು ಭರಮಾಡಿಕೊಳ್ಳಲು ಕೋಟ್ಯಾಂತರ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.
.