ಬೆಂಗಳೂರು: ಹೊಸವರ್ಷ 2026ರ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ ನಗರದಲ್ಲಿ ಭದ್ರತೆ ಕಠಿಣಗೊಂಡಿದೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ನಗರದ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ಮಾಡಿ ಪರಿಶೀಲನೆ ನಡೆಸಿ, ನಂತರ ಆಯುಕ್ತರ ಕಚೇರಿಯಲ್ಲಿ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಆಯುಕ್ತರು, ನ್ಯೂ ಇಯರ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸುಮಾರು 30 ಅಂಶಗಳ ಮಾರ್ಗಸೂಚಿ ನೀಡಲಾಗಿದೆ. ಕ್ಲೌಡ್ ಕಂಟ್ರೋಲ್, ಏಜ್ ಲಿಮಿಟ್, ಕಾರ್ಯಾವಧಿ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು, ಶಬ್ದ ಮಾಲಿನ್ಯ ನಿಯಂತ್ರಣ, ಮಹಿಳೆಯರ ಸುರಕ್ಷತೆ ಸೇರಿದಂತೆ ಹಲವು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ಬೌನ್ಸರ್‌ಗಳ ವರ್ತನೆ ಬಗ್ಗೆ ಬಂದಿರುವ ದೂರುಗಳ ಕುರಿತು ಮಾಲೀಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಎಂಟ್ರಿ–ಎಕ್ಸಿಟ್ ವ್ಯವಸ್ಥೆ, ಫೈರ್ ಸೇಫ್ಟಿ, ಪಾರ್ಕಿಂಗ್ ವ್ಯವಸ್ಥೆ, ಎಮರ್ಜೆನ್ಸಿ ಸಂಪರ್ಕ ಸಂಖ್ಯೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ. ರೇವ್ ಪಾರ್ಟಿ ಅಥವಾ ಅಕ್ರಮ ಪಾರ್ಟಿಗಳಿಗೆ ಅವಕಾಶ ಇರಬಾರದು, ಪಟಾಕಿ ಹಾಗೂ ಆಯುಧಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನರು ಹೋಗಿ ಬರುವ ವೇಳೆ ಸರತಿ ಸಾಲು ವ್ಯವಸ್ಥೆ ಕಡ್ಡಾಯವಾಗಿದ್ದು, ಮ್ಯಾನೇಜರ್‌ಗಳು ಹಾಗೂ ಸಿಬ್ಬಂದಿ ಮದ್ಯಪಾನ ಮಾಡಿರಬಾರದು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಹೆಚ್ಚು ಸಮಯ ಓಪನ್ ಮಾಡಲು ಮನವಿ ಬಂದರೂ, ರಾತ್ರಿ 1 ಗಂಟೆಗೆ ಕ್ಲೋಸ್ ಕಡ್ಡಾಯ ಎಂದು ಹೇಳಲಾಗಿದೆ. ಹೊಸವರ್ಷವನ್ನು ಜವಾಬ್ದಾರಿಯಿಂದ ಆಚರಿಸುವಂತೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ.



