HomeSports NewsIPL ಆರಂಭಕ್ಕೆ ದಿನಗಣನೆ: ಮಹತ್ವದ ಬದಲಾವಣೆ ತಂದ ಬಿಸಿಸಿಐ, ಒಂದು ತಂಡಕ್ಕೆ ಎಷ್ಟು ಪಂದ್ಯಗಳು?

IPL ಆರಂಭಕ್ಕೆ ದಿನಗಣನೆ: ಮಹತ್ವದ ಬದಲಾವಣೆ ತಂದ ಬಿಸಿಸಿಐ, ಒಂದು ತಂಡಕ್ಕೆ ಎಷ್ಟು ಪಂದ್ಯಗಳು?

For Dai;y Updates Join Our whatsapp Group

Spread the love

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಅದರಂತೆ ಈ ಬಾರಿಯ ಟೂರ್ನಿ ಮಾರ್ಚ್ 28ರಿಂದ ಆರಂಭವಾಗಲಿದೆ.

ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಆದರೆ ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿರುವ ಬಿಸಿಸಿಐ, ಟೂರ್ನಿಯ ಸಂಪೂರ್ಣ ಸ್ವರೂಪವನ್ನು ಇನ್ನೂ ಬಹಿರಂಗಪಡಿಸಿಲ್ಲ. ವಿಶೇಷವಾಗಿ ಈ ಬಾರಿಯ ಲೀಗ್ ಹಂತದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಇದರಿಂದ ಐಪಿಎಲ್‌ನ ಒಟ್ಟಾರೆ ಪಂದ್ಯಗಳ ಸಂಖ್ಯೆ ಮತ್ತು ಮಾದರಿ ಕುರಿತು ಕುತೂಹಲ ಹೆಚ್ಚಾಗಿದೆ.

ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ, ಸೀಸನ್ 18 ಮತ್ತು 19ರಲ್ಲಿ ಒಟ್ಟು 84 ಪಂದ್ಯಗಳನ್ನು ಆಯೋಜಿಸುವ ಯೋಜನೆ ಇತ್ತು. ಆದರೆ ಕಳೆದ ಸೀಸನ್‌ನಲ್ಲಿ ಆಟಗಾರರ ಲಭ್ಯತೆ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ 84 ಪಂದ್ಯಗಳ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗಿರಲಿಲ್ಲ. ಈ ಬಾರಿ ಮಾತ್ರ ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆ 84 ಪಂದ್ಯಗಳ ಟೂರ್ನಿ ನಡೆಸುವಂತೆ ಒತ್ತಾಯಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ಒಮ್ಮೆ 84 ಪಂದ್ಯಗಳ ಟೂರ್ನಿ ನಡೆಸಲು ನಿರ್ಧರಿಸಿದರೆ, ಐಪಿಎಲ್‌ನ ಈಗಿನ ಮಾದರಿಯಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯವಾಗಲಿವೆ. ಅಂದರೆ ಟೂರ್ನಿಯನ್ನು ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಈ ಮಾದರಿಯಲ್ಲಿ ಲೀಗ್ ಹಂತದಲ್ಲೇ ಹೆಚ್ಚಿನ ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ತಂಡಕ್ಕೂ ಹಿಂದಿನ ಸೀಸನ್‌ಗಿಂತ ಹೆಚ್ಚುವರಿ ಪಂದ್ಯಗಳು ಸಿಗಲಿವೆ.

ಕಳೆದ ಸೀಸನ್‌ನಲ್ಲಿ ಒಟ್ಟು 74 ಪಂದ್ಯಗಳು ನಡೆದಿದ್ದವು. ಆದರೆ 84 ಪಂದ್ಯಗಳ ಟೂರ್ನಿ ನಡೆದರೆ, ಲೀಗ್ ಹಂತದಲ್ಲೇ 80 ಪಂದ್ಯಗಳು ನಡೆಯಲಿವೆ. ಉಳಿದ ನಾಲ್ಕು ಪಂದ್ಯಗಳು ಪ್ಲೇಆಫ್ ಹಂತಕ್ಕೆ ಮೀಸಲಾಗುತ್ತವೆ. ಅಂದರೆ ಒಟ್ಟು 80+4 ಮಾದರಿಯಲ್ಲಿ ಟೂರ್ನಿ ಸಾಗುವ ಸಾಧ್ಯತೆ ಇದೆ.

ಈ ಮಾದರಿಯಲ್ಲಿ ಪ್ರತಿಯೊಂದು ತಂಡವೂ ಒಟ್ಟು 16 ಲೀಗ್ ಪಂದ್ಯಗಳನ್ನು ಆಡಬೇಕಾಗುತ್ತದೆ. ಇದು ಹಿಂದಿನ ಮಾದರಿಗಿಂತ ಹೆಚ್ಚಿನ ಪಂದ್ಯಗಳಾಗುತ್ತದೆ. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಟೂರ್ನಿ ನಡೆಸಬಹುದೆಂಬ ಲೆಕ್ಕಾಚಾರವೂ ಕೇಳಿಬರುತ್ತಿದೆ.

ಒಂದು ಗುಂಪಿನಲ್ಲಿ ಐದು ತಂಡಗಳಿದ್ದರೆ, ಒಂದು ತಂಡ ತನ್ನದೇ ಗುಂಪಿನ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಬಹುದು. ಹೀಗಾಗಿ ಕೇವಲ ಗುಂಪಿನೊಳಗೆ ಎಂಟು ಪಂದ್ಯಗಳು ನೆರವೇರುತ್ತವೆ. ಬಳಿಕ ಇನ್ನೊಂದು ಗುಂಪಿನ ಐದು ತಂಡಗಳಲ್ಲಿ ಮೂರು ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳು ಮತ್ತು ಉಳಿದ ಎರಡು ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಿಸುವ ಮೂಲಕ ಒಟ್ಟು 16 ಪಂದ್ಯಗಳನ್ನು ಪೂರೈಸಬಹುದು.

ಆದರೆ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಬಿಸಿಸಿಐ ಯಾವುದೇ ಗುಂಪು ವಿಂಗಡಣೆ ಪ್ರಕಟಿಸಿಲ್ಲ. ಇದರಿಂದಲೇ ಈ ಬಾರಿಯ ಟೂರ್ನಿ ನಿಖರವಾಗಿ ಯಾವ ಮಾದರಿಯಲ್ಲಿ ನಡೆಯಲಿದೆ, ಒಂದು ತಂಡ ಎಷ್ಟು ಲೀಗ್ ಪಂದ್ಯಗಳನ್ನು ಆಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಐಪಿಎಲ್‌ನ ಸಂಪೂರ್ಣ ಸ್ವರೂಪದ ಚಿತ್ರ ಸ್ಪಷ್ಟವಾಗಲು ದ್ವಿತೀಯ ಹಂತದ ವೇಳಾಪಟ್ಟಿ ಪ್ರಕಟವಾಗುವವರೆಗೆ ಕಾಯಲೇಬೇಕಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!