ಶಿವಮೊಗ್ಗ: ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು, ಕಳಸವಳ್ಳಿ, ಸಿಗಂದೂರು ಸಂಪರ್ಕಿಸುವ ಸಿಗಂದೂರು ಸೇತುವೆ ಇಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ಸಚಿವ ಗಡ್ಕರಿ ಹೋಮದಲ್ಲಿ ಭಾಗಿಯಾಗಿ, ಶರಾವತಿ ನದಿಗೆ ಬಾಗಿನ ಅರ್ಪಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ ಸೇರಿದಂತೆ ಸ್ಥಳೀಯ ಜನರು ಭಾಗವಹಿಸಿದ್ದರು. ಈ ಸೇತುವೆಯು ಶರಾವತಿ ದ್ವೀಪದ ಜನರ ದಶಕಗಳ ಬೇಡಿಕೆಯಾಗಿತ್ತು.
2010ರಲ್ಲಿ ಪ್ರಾರಂಭವಾದ ನಿರ್ಮಾಣ ಕಾರ್ಯ 2025ರಲ್ಲಿ ಮುಕ್ತಾಯವಾಗಿದೆ. ಸುಮಾರು 423.15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೇತುವೆ ನಿರ್ಮಾಣಕ್ಕೆ ಸಾಗರ ಪಟ್ಟಣದಿಂದ ಹೊಸನಗರ ತಾಲೂಕಿನ ಮರಕುಟುಕದ ವರೆಗೆ ಗ್ರಾಮೀಣ ಭಾಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಮೊದಲ ಹಂತದಲ್ಲಿ ಸೇತುವೆ ನಿರ್ಮಿಸಲಾಗಿದೆ.