ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೨ ಆರೋಪಿ ದರ್ಶನ್ ಅವರಿಗೆ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಡೆವಿಲ್ ಸಿನಿಮಾದ ಶೂಟಿಂಗ್ ಗಾಗಿ ಥೈಲ್ಯಾಂಡ್ ಗೆ ತೆರಳಲು ಜುಲೈ 11ರಿಂದ 30ರವರೆಗೆ 57ನೇ ಸೆಷನ್ಸ್ ಕೋರ್ಟ್ ಅವಕಾಶ ನೀಡಿದೆ.
ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ದರ್ಶನ್, ದುಬೈ ಮತ್ತು ಯುರೋಪ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 439(1)(ಬಿ) ಅಡಿಯಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಮೊದಲು ಸಿನಿಮಾ ಶೂಟಿಂಗ್ಗಾಗಿ ಜುಲೈ 1ರಿಂದ ಜುಲೈ 25ರವರೆಗೆ ಯೂರೋಪ್, ದುಬೈಗೆ ಶೂಟಿಂಗ್ ತೆರಳಲು ಅನುಮತಿ ಕೋರಿದ್ದರು. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದಲ್ಲಿ ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲವೆಂದು ಷರತ್ತು ವಿಧಿಸಿತ್ತು. ಹೀಗಾಗಿ ಷರತ್ತಿನಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.
ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಎಸ್‌ಪಿಪಿ ಪ್ರಸನ್ನ ಕುಮಾರ್, ‘ನಟ ದರ್ಶನ್ ಆರ್ಥಿಕವಾಗಿ ಸಬಲನಾಗಿದ್ದು, ವಿದೇಶಕ್ಕೆ ತೆರಳಲು ಅನುಮತಿ ನೀಡಿದರೆ ಮರಳಿ ಬಾರದೇ ಇರಬಹುದು. ಹೀಗಾಗಿ ಅನುಮತಿ ನೀಡಬಾರದು’ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್ ಜುಲೈ 1ರಿಂದ ಜುಲೈ 25ರವರೆಗೆ ವಿದೇಶ ಪ್ರಯಾಣಕ್ಕೆ ನಟ ದರ್ಶನ್ ಅವರಿಗೆ ಅನುಮತಿ ನೀಡಿತ್ತು. ವಿದೇಶದಿಂದ ಮರಳಿದ ನಂತರ ಕೋರ್ಟ್ಗೆ ತಪ್ಪದೇ ಹಾಜರಾಗಬೇಕೆಂದು ಷರತ್ತು ವಿಧಿಸಿತ್ತು. ಆದರೆ ಕೋರ್ಟ್ ನೀಡಿದ್ದ ಈ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಸಾಧ್ಯವಾಗದ್ದರಿಂದ ಜುಲೈ 11ರಿಂದ ಜುಲೈ 30ರವರೆಗೆ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ನಟ ದರ್ಶನ್ ಅರ್ಜಿ ಸಲ್ಲಿಸಿದರು. ಇಂದು (ಜುಲೈ 8) ಅದರ ವಿಚಾರಣೆ ನಡೆದಿದೆ. ಜುಲೈ 11ರಿಂದ ಜುಲೈ 30ರವರೆಗೆ ಸಿನಿಮಾದ ಶೂಟಿಂಗ್ ಸಲುವಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿದೆ.