ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಮತ್ತು ಸಂಗಡಿಗರಿಗೆ, ಜೈಲು ಬ್ಯಾರಕ್ನಲ್ಲಿ ಟಿವಿ ಒದಗಿಸಲು ಬೆಂಗಳೂರು 64ನೇ ಸೆಷನ್ಸ್ ಕೋರ್ಟ್ ಆದೇಶಿಸಿದೆ. “ಜೈಲಿನಲ್ಲಿ ತಲೆ ಕೆಡುತ್ತಿದೆ, ಇರಲು ಆಗುತ್ತಿಲ್ಲ… ದಯವಿಟ್ಟು ಟಿವಿ ಕೊಡಿಸಿ” ಎಂದು ಆರೋಪಿಗಳಲ್ಲೊಬ್ಬರಾದ ನಾಗರಾಜ್ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಮನವಿ ಮಾಡಿದ್ದಕ್ಕೆ ಕೋರ್ಟ್ ಸ್ಪಂದಿಸಿದೆ. ಇದಕ್ಕೂ ಅನುಗುಣವಾಗಿ ಜೈಲು ಅಧಿಕಾರಿಗಳಿಗೆ ಬ್ಯಾರಕ್ನಲ್ಲಿ ಟಿವಿ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.
ಇದೇ ವೇಳೆ ಕೊಲೆ ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ ಮುಂದುವರಿದಾಗ, ಪ್ರಾಸಿಕ್ಯೂಷನ್ ಪರ ವಕೀಲ ಎಸ್ಪಿಪಿ ಸಚಿನ್ ಅವರು ಪ್ರತ್ಯಕ್ಷ ಸಾಕ್ಷಿಗಳು, ಎಫ್ಎಸ್ಎಲ್ ವರದಿ, ತಾಂತ್ರಿಕ ಸಾಕ್ಷ್ಯಗಳು ಹಾಗೂ 272 ಮಂದಿ ಸಾಕ್ಷಿಗಳ ಸಂಪೂರ್ಣ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದರು. ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಹಾಜರಾಗಲು ಸಮನ್ಸ್ ಜಾರಿಗೊಳಿಸುವಂತೆ ಅವರು ಮನವಿ ಮಾಡಿದರು.
ಈ ಮನವಿಯನ್ನು ಪರಿಗಣಿಸಿದ ಕೋರ್ಟ್, ಮೊದಲ ಹಂತದಲ್ಲಿ ಸಾಕ್ಷಿ ನಂ. 7 ಮತ್ತು 8 — ಅಂದರೆ ಹತ್ಯೆಯಾದ ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥ್ ಮತ್ತು ತಾಯಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ದಂಪತಿಗೆ ಮೊದಲಿಗೆ ಸಾಕ್ಷಿ ಹೇಳಲು ಅವಕಾಶ ನೀಡಲಾಗುತ್ತಿದೆ. ತಮ್ಮ ಮಗನ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಅವರು ಕೋರ್ಟ್ ಮುಂದೆ ಮನವಿ ಮಾಡುವ ಸಾಧ್ಯತೆ ಇದೆ.
ಆದರೆ ಸಾಕ್ಷಿ ನಂ. 7 ಮತ್ತು 8 ಕ್ಕೆ ಮೊದಲು ಸಮನ್ಸ್ ನೀಡಿರುವುದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಪಟ್ಟಿಯ ಕ್ರಮದ ಪ್ರಕಾರವೇ ಸಾಕ್ಷಿಗಳನ್ನು ಕರೆಸಬೇಕು ಎಂದು ವಾದಿಸಿದರು.
ವಿಚಾರಣೆ ವೇಳೆ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಅವರನ್ನು ಪರಪ್ಪನ ಅಗ್ರಹಾರದಿಂದ ಚಿತ್ರದುರ್ಗ ಜೈಲುಗೆ ಶಿಫ್ಟ್ ಮಾಡಲು ಮತ್ತೊಮ್ಮೆ ವಿನಂತಿ ಮಾಡಿದರು. ಆದರೆ ಕೋರ್ಟ್ ಅವರು ಸಲ್ಲಿಸಿದ ಅರ್ಜಿಯನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದು ತಿಳಿಸಿತು.
ಪ್ರಾಸಿಕ್ಯೂಷನ್ ಪರ ಸಲ್ಲಿಸಿದ್ದ 272 ಮಂದಿ ಸಾಕ್ಷಿಗಳ ಪಟ್ಟಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕೋರ್ಟ್ ಎಲ್ಲರಿಗೂ ಕ್ರಮವಾಗಿ ಸಮನ್ಸ್ ಜಾರಿ ಮಾಡಲಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಲಾಗಿದೆ.



