ಹಾಸನ: ನಟ ಯಶ್ ತಾಯಿ ಪುಷ್ಪಾ ವಿರುದ್ಧದ ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನ್ಯಾಯಾಲಯ ಕಠಿಣ ತೀರ್ಪು ನೀಡಿದ್ದು, ವಿವಾದಿತ ಗೋಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಕೋರ್ಟ್ ಆದೇಶದಂತೆ ಹಾಸನ ನಗರದಲ್ಲಿ ಜೆಸಿಬಿ ಮೂಲಕ ಕಾಂಪೌಂಡ್ ಧ್ವಂಸಗೊಳಿಸಿದ ದೃಶ್ಯಗಳು ಗಮನ ಸೆಳೆದಿವೆ.
ವಿದ್ಯಾನಗರದಲ್ಲಿರುವ ಪುಷ್ಪಾ ಅವರ ಮನೆಯ ಸಮೀಪ ನಿರ್ಮಿಸಲಾಗಿದ್ದ ಕಾಂಪೌಂಡ್, ಬೇರೆಯವರ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಲಕ್ಷ್ಮಮ್ಮ ಎಂಬವರ ಹೆಸರಿನ ಜಾಗದಲ್ಲಿ ಸುಮಾರು 1,500 ಚದರ ಅಡಿ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಜಾಗದ ಮಾಲೀಕ ದೇವರಾಜು ಆರೋಪಿಸಿದ್ದಾರೆ.
ಈ ಕುರಿತು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ನಂತರ, ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಂಪೌಂಡ್ ತೆರವುಗೊಳಿಸಲು ಅನುಮತಿ ನೀಡಿತ್ತು. ಅದರಂತೆ ಜಿಪಿಎ ಹೋಲ್ಡರ್ ಮೂಲಕ ಇಂದು ಬೆಳ್ಳಂಬೆಳಗ್ಗೆ ಜೆಸಿಬಿ ಬಳಸಿ ಗೋಡೆ ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ.
ಅಕ್ರಮವಾಗಿ ಗೋಡೆ ನಿರ್ಮಿಸಲಾಗಿದೆ ಎಂಬ ಆರೋಪವನ್ನು ಜಾಗದ ಮಾಲೀಕರು ಪುನರುಚ್ಚರಿಸಿದರೆ, ಇತ್ತ ಯಶ್ ತಾಯಿ ಪುಷ್ಪಾ ಅವರು ಆರೋಪಗಳನ್ನು ನಿರಾಕರಿಸಿ, ಕಾನೂನು ಹೋರಾಟ ನಡೆಸುವುದಾಗಿ ಮೂಲಗಳು ತಿಳಿಸಿವೆ.



