ಚಿಕ್ಕಮಗಳೂರು:- ಕೋರ್ಟ್ ಆದೇಶವಾಗಿದೆ ಎಂದು ಏಕಾಏಕಿ ಮಠದ ಜಾಗ ತೆರವು ಮಾಡಿದ 14 ಮಂದಿ ಅನ್ಯಕೋಮಿನ ಯುವಕರ ವಿರುದ್ಧ ಕೇಸ್ ದಾಖಲಾಗಿದೆ.
ಸ್ಥಳಿಯ ಆಡಳಿತದ ಗಮನಕ್ಕೆ ತರದೆ ಮಠದ ಜಾಗವನ್ನು ಬಡಾಮಕಾನ್ ಜಾಮೀಯ ಮಸೀದಿ ಕಮಿಟಿಯ ಸದಸ್ಯರು ತೆರವು ಮಾಡಿದ್ದಾರೆ. ಈ ಘಟನೆ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ನಡೆದಿದೆ.
250ಕ್ಕೂ ಹೆಚ್ಚು ಅನ್ಯಕೋಮಿನ ಯುವಕರು ನಗರಸಭೆ ಗಮನಕ್ಕೆ ತರದೆ ಜೆಸಿಬಿ ತಂದು ಮಂಗಳವಾರ ಬೆಳ್ಳಂಬೆಳಗ್ಗೆ ಮನೆ, ಹೋಟೆಲ್ ಹಾಗೂ ಕಟ್ಟಡವನ್ನ ತೆರವು ಮಾಡಿದ್ದರು. ಈ ಬಗ್ಗೆ ನಲ್ಲೂರು ಮಠದ ವಂಶಸ್ಥರು, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು ಜೆಸಿಬಿಯನ್ನು ಹೊರಗೆ ಕಳಿಸಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಕೂಡಲೇ ತೆರವು ಕಾರ್ಯಚರಣೆ ನಿಲ್ಲಿಸಿ, ಸಭೆಗೆ ಆಗಮಿಸುವಂತೆ ಎಸ್ಪಿ ಸೂಚಿಸಿ, ಬೆಳಗ್ಗೆ ಹಿಂದೂ ಸಂಘಟನೆ ಜೊತೆ ಮಧ್ಯಾಹ್ನ ಮುಸ್ಲಿಂ ಸಂಘಟನೆ ಜೊತೆ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಹಿಂದೂ ಸಂಘಟನೆಯವರು ಕೂಡಲೇ ಕಟ್ಟಡ ನಿರ್ಮಿಸಿಕೊಡಬೇಕು. ನಷ್ಟಕ್ಕೆ ದಂಡ ತೆರಬೇಕು ಹಾಗೂ ಜೆಸಿಬಿ ವಶಕ್ಕೆ ಪಡೆದು, ಕಟ್ಟಡ ತೆರವು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರು. ಇದೀಗ, ನಲ್ಲೂರು ಮಠದ ಕುಟುಂಬಸ್ಥರು ಹಾಗೂ ಹೋಟೆಲ್ ಮಾಲೀಕರು ನಗರದ ಬಸವನಹಳ್ಳಿ ಠಾಣೆಗೆ ದೂರು ನೀಡಿದ್ದು, ವಕ್ಫ್ ಬೋರ್ಡ್ ಅಧಿಕಾರಿ ಸೇರಿ ಜಾಮೀಯ ಮಸೀದಿ ಕಮಿಟಿಯ 14 ಜನರ ಮೇಲೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.