ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲುಕೊಯ್ದ ಪ್ರಕರಣಕ್ಕೆ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಸಿ.ಎನ್ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೃತ್ಯದ ಹಿಂದೆ ಸಂಘಟನೆ, ಕೆಲವರು ಇರಬಹುದು. ಕಾಂಗ್ರೆಸ್‌ನ ದ್ವೇಷದ ರಾಜಕಾರಣದಿಂದ ಈ ರೀತಿಯಾಗುತ್ತಿದೆ. ಮಾನಸಿಕವಾಗಿ ಕೆಲ ವ್ಯಕ್ತಿಗಳಿಗೆ ಉತ್ತೇಜನ ಕೊಟ್ಟಿದಾರೆ.
ಗೋಮಾಂಸ, ಗೋವಿನ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು. ಗೋಹತ್ಯೆ, ಗೋಮಾಂಸ ತಿನ್ನಲು ಅವಕಾಶ ಕೊಡಬೇಕಾ? ಎನ್ನುವುದನ್ನು ತಿಳಿಸಬೇಕು. ಸರ್ಕಾರ ಎಲ್ಲೋ ಒಂದು ಕಡೆ ಒಂದು ಸಮುದಾಯದ ಜನರನ್ನು ಓಲೈಸುತ್ತಿದೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಇದರಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಇದೇ ವೇಳೆ ಆರೋಪಿ ಬಿಹಾರ ಮೂಲದವನು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರದವರಿಗೆ ಇಷ್ಟೊಂದು ಧೈರ್ಯ ಹೇಗೆ ಬರುತ್ತದೆ? ಇದರ ಹಿಂದೆ ಬೇರೆ ಯಾರಾದರೂ ಇರಬಹುದು. ಇಂತಹ ಘಟನೆಗಳು ಮತ್ತೆ ನಡೆಯಬಾರದು ಎಂದರೆ ಸ್ಪಷ್ಟ ತನಿಖೆಯಾಗಬೇಕು. ಆಯುಕ್ತರು ಸ್ಪಷ್ಟ ತನಿಖೆಯ ಮೂಲಕ ಸತ್ಯವನ್ನ ಹೊರ ತರಬೇಕು ಎಂದರು.