ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಟಿಎಪಿಪಿಎಂಎಸ್‌ನಲ್ಲಿ ಶುಕ್ರವಾರ ಸರ್ಕಾರದ ಬೆಂಬಲ ಬೆಲೆಯಡಿಯಲ್ಲಿ ಗೋವಿನಜೋಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಯಿತು.
ಟಿಎಪಿಪಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ಚಾಲನೆ ನೀಡಿ ಮಾತನಾಡಿ, ಮುಕ್ತ ಮಾರುಕಟ್ಟೆಯಲ್ಲಿ ಗೋವಿನಜೋಳದ ಬೆಲೆ ಕುಸಿತ ಕಂಡಿದ್ದರಿಂದ ರೈತರು ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದು ಹೋರಾಟ ಮಾಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪ್ರತಿ ಕ್ವಿಂಟಲ್‌ಗೆ 2400 ರೂ ಬೆಂಬಲ ಬೆಲೆಯಡಿ ಖರೀದಿಗೆ ಮುಂದಾಗಿದೆ. ಮುಂಗಾರಿನ ಬೆಳೆ ನಷ್ಟದಲ್ಲಿದ್ದ ರೈತರಿಗೆ ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುತ್ತಿರುವುದು ಸಂತಸ ತಂದಿದೆ. ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯನ್ನು ಲಕ್ಷ್ಮೇಶ್ವರದ ಎಪಿಎಂಸಿ ಪ್ರಾಂಗಣದ ಗೋಡೌನ್‌ನಲ್ಲಿ ತೆಗೆದುಕೊಳ್ಳಲಾಗುತ್ತಿದೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಉಪಾಧ್ಯಕ್ಷ ಶೇಖಣ್ಣ ಕಾಳೆ, ಸದಸ್ಯರಾದ ವಿರೂಪಾಕ್ಷಪ್ಪ ಪಡಿಗೇರಿ, ಸುನೀಲ ಮಹಾಂತಶೆಟ್ಟರ, ವೀರಭದ್ರಪ್ಪ ಶಿಗ್ಲಿ, ಈರಣ್ಣ ಮುಳಗುಂದ, ಜಯಕ್ಕ ಕಳ್ಳಿ, ರತ್ನಾ ಗುಂಜಳ ಸೇರಿ ರೈತರು ಇದ್ದರು.



