ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಗೋದಾನಕ್ಕಿಂತ ಶ್ರೇಷ್ಠ ದಾನವಿಲ್ಲ. ಕಾಮಧೇನು ಕಲ್ಪವೃಕ್ಷ ಎನ್ನುವಂತೆ ಹಸುವಿನ ಉತ್ಪನ್ನಗಳಲ್ಲಿ ಸಂಜೀವಿನಿ ಅಡಗಿದೆ. ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೇವತೆಗಳ ಸ್ಥಾನವಿದೆ ಎಂದು ಮಹಾರಾಷ್ಟ ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಲಕ್ಷದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಆಕಳ ಹಾಲಿನಲ್ಲಿ ಅಮೃತವೇ ಅಡಗಿದೆ. ದೇಶದಲ್ಲಿ ಪ್ರತಿನಿತ್ಯ 65 ಕೋಟಿ ಲೀಟರ್ ಹಾಲಿನ ಅವಶ್ಯಕತೆಯಿದ್ದು, ಕೇವಲ 15 ಕೋಟಿ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. 50 ಕೋಟಿ ಲೀಟರ್ ನಕಲಿ ಹಾಲು ಮಾರಾಟವಾಗುತ್ತಿದ್ದು, ಇದು ದೇಶದ ಜನರಲ್ಲಿ ಅನಾರೋಗ್ಯ, ಆಸ್ಪತ್ರೆಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ನಮ್ಮ ಪೂರ್ವಜರಿಗೆ ಆಕಳಿನ ಮಹತ್ವ ಗೊತ್ತಿತ್ತು. ಆದರೆ ಈಗ ಆಕಳ ಬದಲಾಗಿ ತಂದೆ-ತಾಯಿಗಳಿಗಿAತಲೂ ನಾಯಿಗಳಿಗೆ ಮಹತ್ವ ಕೊಡಲಾಗುತ್ತಿದೆ. 60/70ಸಾವಿರ ಕೊಟ್ಟು ನಾಯಿ ಸಾಕಿ ಅನಾರೋಗ್ಯ ತಂದುಕೊಳ್ಳುವ ಬದಲು 30/40 ಸಾವಿರ ಕೊಟ್ಟು ಗೋಮಾತೆಯನ್ನು ಸಾಕಿ.
ಗೋಮಾತೆಯ ಉತ್ಪನ್ನಗಳಲ್ಲಿ ಎಲ್ಲ ವಿಟಾಮಿನ್‌ಗಳು ಮಕ್ಕಳಿಗೆ ಸಿಗುತ್ತವೆ. ಭಗವದ್ಗೀತೆ, ಮಹಾಭಾರತದಂತಹ ಹಿಂದೂ ಪವಿತ್ರ ಗ್ರಂಥಗಳಲ್ಲಿ ಕಾಮಧೇನುವಿನ ಮಹಿಮೆ ಹಾಗೂ ಶ್ರೇಷ್ಠತೆಯ ಬಗ್ಗೆ ವರ್ಣಿಸಿರುವುದು ಆಕಳಿನ ಮಹತ್ವ ಅರ್ಥವಾಗುತ್ತದೆ. ಗೋಮಾತೆ ಪೂಜಿಸುವುದರಿಂದ ನಮ್ಮ ಪಾಪಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗೋವಿನ ಮಹತ್ವದ ಬಗ್ಗೆ ಸೇರಿದ್ದ ಅಪಾರ ಭಕ್ತರಿಗೆ ಮನಮುಟ್ಟುವಂತೆ ಹೇಳಿದರು.
ಈ ವೇಳೆ ಕನ್ನೇರಿ ಮಠದ ಗೋಶಾಲೆಗೆ ಲಕ್ಮಶ್ವರದ ಆದಿ ಕುಟುಂಬದವರು ತುಂಬು ಗರ್ಭಿಣಿ ಗೋಮಾತೆಯನ್ನು ದಾನವಾಗಿ ಸಮರ್ಪಿಸಿದರು. ಈ ವೇಳೆ ಮುಕ್ತಿಮಂದಿರ, ಶಿಗ್ಲಿ ಶ್ರೀಗಳು, ಜನಪ್ರತಿನಿಧಿಗಳು ಇದ್ದರು.