ಮಂಡ್ಯ: ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದ್ದಾರೆ.
ಆದ್ದರಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರಸಿದ್ಧ ಕ್ಷೇತ್ರ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಿಪಿ ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಭೇಟಿ ನೀಡಿದ್ದಾರೆ. ತಮ್ಮ ಪತಿ ಗೆಲುವಿನ ಬೆನ್ನಲ್ಲೇ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಶೀಲಾ ಯೋಗೇಶ್ವರ್, ದೇವರ ಹರಕೆ ತೀರಿಸಿದ್ರು.
ಹೌದು ಚನ್ನಪಟ್ಟಣ ಉಪ ಚುನಾವಣೆ ಪೂರ್ವದಲ್ಲಿ ಹೊಳೆ ಆಂಜನೇಯ ದೇಗುಲಕ್ಕೆ ಯೋಗೇಶ್ವರ್ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ಪತಿ ಯೋಗೇಶ್ವರ್ ಗೆಲುವಿಗಾಗಿ ಶೀಲಾ ಯೋಗೇಶ್ವರ್ ಹೊಳೆ ಆಂಜನೇಯನಿಗೆ ಒಂದು ಕಾಲು ರೂಪಾಯಿ ಕಟ್ಟಿ ಹರಕೆ ಕಟ್ಟಿಕೊಂಡಿದ್ದರು. ಈಗ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ..