ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ಬ್ಲೂ ಲೈನ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಭಾರೀ ಅವಘಡ ತಪ್ಪಿದೆ. ನಸುಕಿನ ಜಾವ 3.45ರ ಸುಮಾರಿಗೆ ಬೃಹತ್ ಕ್ರೇನ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಕಾರ್ಮಿಕರು ಅಥವಾ ವಾಹನ ಸವಾರರಿಗೆ ಗಾಯವಾಗಿಲ್ಲ.
ಘಟನೆ ಸಂಭವಿಸಿದ ವೇಳೆ ಸುತ್ತಮುತ್ತ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಭಾರವಾದ ಉಕ್ಕಿನ ಗಿರ್ಡರ್ ಎತ್ತುವ ಸಂದರ್ಭದಲ್ಲಿ ಕ್ರೇನ್ ಏಕಾಏಕಿ ಸಮತೋಲನ ಕಳೆದುಕೊಂಡು ಕೆಳಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ನೀಡಿದ ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ ಸದಾಶಿವ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉಕ್ಕಿನ ಗಿರ್ಡರ್ ಎತ್ತುವಾಗ ಕ್ರೇನ್‌ನ ಒಂದು ಭಾಗ ಏಕಾಏಕಿ ಮೇಲಕ್ಕೆ ಚಲಿಸಿ ಸಮತೋಲನ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.
ಘಟನೆಯ ಎಕ್ಸ್‌ಕ್ಲೂಸಿವ್ ದೃಶ್ಯಗಳು ಲಭ್ಯವಾಗಿದ್ದು, ಇಂದು ಮುಂಜಾನೆ ಸುಮಾರು 3.20ರ ವೇಳೆಗೆ ಅಪಘಾತ ನಡೆದಿರುವುದು ದೃಢಪಟ್ಟಿದೆ. ವಾಹನಗಳ ಓಡಾಟದ ಸಮಯದಲ್ಲೇ ಕ್ರೇನ್ ಪಲ್ಟಿಯಾಗಿರುವುದಾಗಿ ಹೇಳಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಬೆಂಗಳೂರು ನಗರದಲ್ಲಿ ಹಲವು ಭಾಗಗಳಲ್ಲಿ ಮೆಟ್ರೋ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ಕೆಲ ರಸ್ತೆಗಳಲ್ಲೀಗಾಗಲೇ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಇಂತಹ ಘಟನೆಗಳು ಸಾರ್ವಜನಿಕ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.



