ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರವಾಹಿಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಆರಂಭದಿಂದಲೂ ಉತ್ತಮ ಟಿಆರ್ ಪಿ ಪಡೆದುಕೊಂಡು ಮುನ್ನುಗ್ಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದೆ. ಈ ಮಧ್ಯೆ ಧಾರವಾಹಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಕೊಟ್ಟಿದ್ದಾರೆ.
‘ಹೆಣ್ಣು ಮಕ್ಕಳ ಹೆತ್ತೋರು ಎಲ್ಲ ದೇವರಿಗು ದೊಡ್ಡೋರು’ ಅನ್ನುವ ಈ ಧಾರಾವಾಹಿಯ ಹಾಡಿನ ಸಾಲು ಪುಟ್ಟಕ್ಕನ ಕತೆಯ ಸಾರವನ್ನು ತೋರಿಸುತ್ತದೆ. ಗಂಡು ಮಗು ಆಗಿಲ್ಲ ಅನ್ನುವ ಕಾರಣಕ್ಕೆ ಗಂಡ ಗೋಪಾಲ ಪುಟ್ಟಕ್ಕನನ್ನು ಬಿಟ್ಟು ಹೋಗುತ್ತಾನೆ. ತಂದೆ ಇಲ್ಲದೆ ತಬ್ಬಲಿಯಾದ ಮೂರು ಹೆಣ್ಣು ಮಕ್ಕಳನ್ನು ಹೆಗಲಿಗೆ ಕಟ್ಟಿಕೊಂಡು ಅವರ ಜೀವನವನ್ನು ರೂಪಿಸುತ್ತಾಳೆ ಪುಟ್ಟಕ್ಕ.
ಇದೀಗ ಈ ಧಾರಾವಾಹಿ ಮಹತ್ತರ ಘಟ್ಟದಲ್ಲಿ ಬಂದು ನಿಂತಿದೆ. ತನ್ನ ಆಸೆ, ಕನಸಿನಂತೆ ಜಿಲ್ಲಾಧಿಕಾರಿ ಆಗಿದ್ದ ಸ್ನೇಹಾ, ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಳು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ನಿಧನದ ಬಳಿಕವೂ ಅವ್ಯವಹಾರದ ಆರೋಪ ಬಂದಿದ್ದು, ಮಗಳ ಪರವಾಗಿ ಪುಟ್ಟಕ್ಕ ಹೋರಾಟಕ್ಕೆ ಮುಂದಾಗಿದ್ದಾಳೆ.
ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಗಳಿಗೆ ಅಂಟಿದ ಕಳಂಕ ತೊಳೆಯುವ ಈ ಕಾರ್ಯಕ್ಕೆ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗೆ ಬೇಸತ್ತಿರುವ ಪುಟ್ಟಕ್ಕನಿಗೆ ಸಾಥ್ ಕೊಡಲು ‘ಕ್ರೇಜಿ ಸ್ಟಾರ್ ರವಿಚಂದ್ರನ್’ ಮುಂದಾಗಿದ್ದಾರೆ. ಜಸ್ಟಿಸ್ ಫಾರ್ ಸ್ನೇಹಾ ಹೋರಾಟಕ್ಕೆ ರವಿಚಂದ್ರನ್ ಕೈ ಜೋಡಿಸಿದ್ದಾರೆ. ಈ ಮೂಲಕ ಈ ಹಿಂದೆ ಪುಟ್ನಜ್ಜ ಹಾಗೂ ಪುಟ್ಮಲ್ಲಿಯಾಗಿ ಮೋಡಿ ಮಾಡಿದ್ದ ಉಮಾಶ್ರೀ ದಸಹಾಗೂ ರವಿಚಂದ್ರನ್ ಮತ್ತೆ ಸ್ಕ್ರೀನ್ ಮೇಲೆ ಒಂದಾಗಿದ್ದಾರೆ.
ರವಿಚಂದ್ರನ್ ಹಾಗೂ ಉಮಾಶ್ರೀ ಇಬ್ಬರೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಅದರಲ್ಲಿ ‘ಪುಟ್ನಂಜ’ ಸಿನಿಮಾದ ಪಾತ್ರ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಆದರೆ, ಇತ್ತೀಚೆಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಒಟ್ಟಿಗೆ ಕಾಣಿಸಿಕೊಳ್ತಿರೋದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿಯಾಗಿದೆ.