ಏಳು ಬಾಗಿಲು ಇರಬಾರದೆಂದು ಹೊಸ ಬಾಗಿಲು ಸೃಷ್ಟಿ: ವಾಸ್ತುವಿಗೆ ಶರಣಾದ ಗ್ರಾಮ ಪಂಚಾಯತಿ…!

0
Spread the love

ಲಕ್ಷ್ಮೇಶ್ವರ: ವಾಸ್ತು ಪ್ರಕಾರದ ಹೆಸರಿನಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಮತ್ತೊಂದು ಹೊಸ ಬಾಗಿಲು ಸೃಷ್ಟಿ ಮಾಡಿರುವ ಸಮೀಪದ ಸೂರಣಗಿ ಗ್ರಾ.ಪಂ, ಇದೀಗ ಇದು ವಾಸ್ತು ವಿಚಾರಕ್ಕೆ ಸಂಬಂದಿಸಿದ್ದಲ್ಲ, ಪಂಚಾಯಿತಿ ಕೆಲಸಕ್ಕೆ ಆಗಮಿಸುವವರಿಗೆ ಅನೂಕೂಲವಾಗಲಿ ಎನ್ನುವ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ ಎನ್ನುವ ಉತ್ತರಗಳನ್ನು ಹೇಳುತ್ತಿರುವುದರಿಂದ, ಇದರಲ್ಲಿ ವಾಸ್ತವ ಯಾವುದು ಎನ್ನುವ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುವಂತಾಗಿದೆ.

Advertisement

ಸೂರಣಗಿ ಗ್ರಾ.ಪಂ ಕಟ್ಟಡ 1966ರಲ್ಲಿ ನಿರ್ಮಾಣವಾಗಿದ್ದು, ಇಲ್ಲಿಯವರೆಗೆ ಇಲ್ಲದ ವಾಸ್ತು ವಿಚಾರ ಇದೀಗ ತಲೆ ಎತ್ತಿರುವದು ವಿಚಿತ್ರವಾಗಿದೆ. ಸುಮಾರು 55 ವರ್ಷ ಹಳೆಯದಾದ ಈ ಕಟ್ಟಡ 7 ಬಾಗಿಲುಗಳನ್ನು ಹೊಂದಿತ್ತು. ಈ ಹಿಂದಿನ ಆಡಳಿತ ಮಂಡಳಿಯವರು 7 ಬಾಗಿಲು ಇದೆ ಎಂಬ ಕಾರಣಕ್ಕೆ ಒಂದು ಬಾಗಿಲು ಬೀಗ ಹಾಕಿ, ಬಾಗಿಲ ಹಿಂದೆ ಕಪಾಟು ಮಾಡಿಸಿದ್ದರು.ಪ್ರಸ್ತುತ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಒಂದು ಹೊಸ ಬಾಗಿಲು ಸೃಷ್ಟಿ ಮಾಡಿದ್ದು, ಇದಕ್ಕೆ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ತಾಲೂಕಿನಲ್ಲಿ ಅನೇಕ ಪಂಚಾಯಿತಿಗಳು ಸ್ವಂತ ಕಟ್ಟಡ ಇಲ್ಲದೇ ಬೇರೆ ಬೇರೆ ಕಟ್ಟಡಗಳಲ್ಲಿ ಆಡಳಿತ ನಿರ್ವಹಣೆ ಮಾಡುತ್ತಿವೆ.ಅದಲ್ಲದೆ ಲಕ್ಷ್ಮೇಶ್ವರ ತಾ.ಪಂ ಸಹ ಸ್ವಂತ ಕಟ್ಟಡ ಹೊಂದಿಲ್ಲ. ಹೀಗಿರುವಾಗ `ವಾಸ್ತು ಪ್ರಕಾರ’ ಎನ್ನುವ ಕಾರಣಕ್ಕೆ ಕಟ್ಟಡದಲ್ಲಿ ಬದಲಾವಣೆ ಏಕೆ ಎನ್ನುವದು ಗ್ರಾಮಸ್ಥರ ಪ್ರಶ್ನೆಯಾಗಿದೆ.99 ಸಾವಿರ ರೂ ಖರ್ಚು ಮಾಡಿಸಲಾಗಿದ್ದು, ಬಾಗಿಲು, ಬಣ್ಣ, ವಿದ್ಯುತ್ ರಿಪೇರಿ, ಸಿ.ಸಿ ಕ್ಯಾಮೆರಾ ಸೇರಿದಂತೆ ಅನೇಕ ಕೆಲಸಕ್ಕೆ ಸಾಮಾನ್ಯ ಸಭೆಯಲ್ಲಿ ಎಲ್ಲರ ನಿರ್ಣಯ ತೆಗೆದುಕೊಂಡು ಮಾಡಲಿದೆ ಎಂದು ಗ್ರಾ.ಪಂ ಸದಸ್ಯ ಪ್ರವೀಣ ಸೂರಣಗಿ ಹೇಳುತ್ತಿದ್ದಾರೆ.

ಕಟ್ಟಡದ ದುರಸ್ತಿ ಹೆಸರಿನಲ್ಲಿ ವಾಸ್ತು ಪ್ರಕಾರ ಕಟ್ಟಡ ಇಲ್ಲ ಎಂದು ಹೊಸ ಬಾಗಿಲು ಸೃಷ್ಟಿ ಮಾಡಲಾಗಿದೆ. ಇದಕ್ಕೆ ಗ್ರಾ.ಪಂ.ನ ಎಲ್ಲಾ ಸದಸ್ಯರ ಒಪ್ಪಿಗೆ ತೆಗೆದುಕೊಳ್ಳದೆ ಅಧ್ಯಕ್ಷರು ಹಾಗೂ ಕೆಲವೇ ಸದಸ್ಯರು ಮಾತ್ರ ದುರಸ್ತಿ ಹೆಸರಿನಲ್ಲಿ ಕಟ್ಟಡ ಹಾಳು ಮಾಡುತ್ತಿದ್ದಾರೆ ಎಂದು ಉಪಾಧ್ಯಕ್ಷ ಶಂಕ್ರಣ್ಣ ಶಿರನಹಳ್ಳಿ ಆರೋಪಿಸಿದ್ದಾರೆ.ಸೂರಣಗಿ ಗ್ರಾಮ ಪಂಚಾಯಿತಿ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಮಾಹಿತಿ ಪಡೆದು ಪರಿಶೀಲನೆ ಮಾಡಲಾಗುವದು ಎಂದು ಪ್ರಭಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದ್ದಾರೆ.

15ನೇ ಹಣಕಾಸು ಯೋಜನೆಯಲ್ಲಿ ಪಂಚಾಯಿತಿ ಕಟ್ಟಡ ದುರಸ್ತಿ ಕಾಮಗಾರಿ ಮಾಡಲಾಗುತ್ತಿದೆ. ಒಂದು ಮನೆ ನಿರ್ಮಾಣವಾಗಬೇಕಾಗದರೆ ವಾಸ್ತು ನೋಡುತ್ತೇವೆ. ಅದರಂತೆ ಆಡಳಿತ ಮಾಡುವ ನಮಗೆ ಗ್ರಾ.ಪಂ ಕಟ್ಟಡದಲ್ಲಿ ಏಳು ಬಾಗಿಲು ಇರಬಾರದು, ಏಳು-ಬೀಳು ಎನ್ನುವುದು ಆಗಬಾರದು ಎಂದು ಇನ್ನೊಂದು ಬಾಗಿಲು ತೆರೆಯಲಾಗಿದೆ. ಇದಕ್ಕೆ ಸದಸ್ಯರ ಒಪ್ಪಿಗೆ ಇದೆ.
– ಪ್ರವೀಣ ಸೂರಣಗಿ.ಗ್ರಾಮ ಪಂಚಾಯಿತಿ ಸದಸ್ಯ.


Spread the love

LEAVE A REPLY

Please enter your comment!
Please enter your name here