ವಿಜಯಸಾಕ್ಷಿ ಸುದ್ದಿ, ಗದಗ :
ಧರ್ಮವು ಮನುಷ್ಯನು ಭೂಮಿಯ ಮೇಲೆ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ಜೀವ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಿಸರ್ಗಧರ್ಮ, ಪ್ರಾಣಿಧರ್ಮ, ಮನುಷ್ಯ ಧರ್ಮ, ವೈದ್ಯ ಧರ್ಮ, ಮೊದಲಾದವು ಕಾಣಸಿಗುತ್ತವೆ. ಮನುಷ್ಯನ ಬದುಕಿನಿಂದ ಪ್ರಪಂಚ ಕೆಡಬಾರದು. ಮನುಷ್ಯ ಸಂತೋಷವಾಗಿರುವದನ್ನು ಬಿಟ್ಟಿರಬಾರದು ಎಂಬುದೂ ಸಹ ಧರ್ಮದ ಸಾರವಾಗಿದೆ. ಮನುಷ್ಯ ಧರ್ಮ ಕಾರ್ಯಗಳನ್ನು, ಪುಣ್ಯ ಕಾರ್ಯಗಳನ್ನು ಮಾಡಿ ಧರ್ಮವಂತನಾಗಿ ನಡೆಯುವುದು ಹಾಗೂ ದುಡಿಮೆಯೇ ನಿಜವಾದ ಧರ್ಮ, ಮನಸ್ಸು ಮತ್ತು ಸೃಷ್ಟಿಯನ್ನು ಕೆಡದಂತೆ ನೋಡಿಕೊಳ್ಳುವುದು ಧರ್ಮವಾಗಿದೆ ಎಂದು ಕೊಪ್ಪಳ ಗವಿಮಠದ ಜಗದ್ಗುರು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಚಿಕೇನಕೊಪ್ಪದ ಸುಕ್ಷೇತ್ರ ಬಳಗಾನೂರಿನ ಚನ್ನವೀರಶರಣರ ಮಠದಲ್ಲಿ ಚನ್ನವೀರಶರಣರ ೨೯ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಚಿಂತನಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದರು.
ಹುಟ್ಟು-ಸಾವುಗಳ ನಡುವೆ ಬದುಕು ಕ್ಷಣಿಕವಾಗಿದೆ. ಮನುಷ್ಯ ಯಶಸ್ವಿಯಾಗುವುದು ಹುದ್ದೆ, ದುಡ್ಡು, ಸಂಪತ್ತಿನಿಂದಲ್ಲ. ತನ್ನ ಕಾರ್ಯಗಳಿಂದ, ಮಾತುಗಳಿಂದ. ಇನ್ನೊಬ್ಬರ ಬದುಕಿನಲ್ಲಿ ಸಂತೋಷವನ್ನು ತಂದುಕೊಡುವವನು ಯಶಸ್ವಿಯಾಗುತ್ತಾನೆ. ಚಿಕೇನಕೊಪ್ಪದ ಚನ್ನವೀರ ಶರಣರು ಸರ್ವರೂ ಸುಖವಾಗಿರಲಿ ಎಂಬ ಸಂಕಲ್ಪ ಮಾಡಿ ಸರ್ವರ ಒಳಿತು ಬಯಸಿದವರು. ಶರಣರು ಬಳಸಿದ ಭಾಷೆ ಮೌನ, ಅದು ದೇವಭಾಷೆ. ಮೌನದಿಂದ ಎಲ್ಲರ ಹೃದಯದಲ್ಲಿದ್ದಾರೆ. ಗುರು ಮೆಚ್ಚಿದ ಶ್ರೇಷ್ಠ ಶಿಷ್ಯ ಚನ್ನವೀರಶರಣರು. ಗುರುಭಕ್ತಿ ದೇವರನ್ನಾಗಿಸುವುದು ಎಂಬುದಕ್ಕೆ ಶರಣರೇ ಸಾಕ್ಷಿ ಎಂದು ಆಶೀರ್ವಚನ ನೀಡಿದರು.
ಶೇಗುಣಿಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಉಪದೇಶಾಮೃತ ನೀಡಿ, ಜಾತಿ, ಮತ, ಪಂಥ, ವರ್ಗ, ವರ್ಣ, ಮೇಲು-ಕೀಳು, ನೀಚ, ಉಚ್ಛ ಎನ್ನದೆ ಮಠಗಳು ಸಮಾಜಮುಖಿ ಕಾರ್ಯಗಳ ಮೂಲಕ ಜನಕಲ್ಯಾಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಹೊಸಳ್ಳಿಯ ಶ್ರೀ ಬೂದೀಶ್ವರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಲೌಕಿಕ ಮತ್ತು ಪಾರಮಾರ್ಥಿಕ ಎರಡರಲ್ಲೂ ಜೀವನ ನಿರ್ವಹಿಸಿ ಜೀವನದ ಸಾರ್ಥಕತೆ ಪಡೆಯಬೇಕೆಂದರು. ಶ್ರೀ ಶಿವಶಾಂತವೀರ ಶರಣರು ನೇತೃತ್ವ ವಹಿಸಿದ್ದರು. ಹೆಬ್ಬಾಳ ಬೃಹನ್ಮಠದ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮಂಗಳೂರಿನ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಅಣದೂರಿನ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇವಡ್ಡಟ್ಟಿಯ ಷ.ಬ್ರ. ವಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಿರೋಳದ ಯಚ್ಚರೇಶ್ವರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರಿಗಳು ಆಧ್ಯಾತ್ಮಿಕ ಅನುಭಾವದ ನುಡಿಗಳನ್ನಾಡಿದರು. ದಿಯಾಪೀರಸಾಬ ಕೌತಾಳ ವಚನ ಸಂಗೀತ ನೀಡಿದಳು. ಬೆಂಗಳೂರಿನ ಮಹೇಶಕುಮಾರ ಹೇರೂರ ತಂಡದವರು ನೀಡಿದ ಸಂಗೀತ ಕಚೇರಿ ಎಲ್ಲರ ಮನಸೂರೆಗೊಂಡಿತು. ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಧಾರವಾಡ ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಬಿ.ವಾಯ್. ಡೊಳ್ಳಿನ ಸ್ವಾಗತಿಸಿದರು. ಶಿವಲಿಂಗ ಶಾಸ್ತ್ರಿ ಸಿದ್ದಾಪೂರ ಕಾರ್ಯಕ್ರಮ ನಿರೂಪಿಸಿದರು. ಶಿವಶರಣಗೌಡ ಯರಡೋಣಿ ವಂದಿಸಿದರು.
ವಿದೇಶಗಳಲ್ಲಿ ಭೌತಿಕ ಸಂಪತ್ತು ಹಾಗೂ ಸೌಕರ್ಯಗಳು ಹೇರಳವಾಗಿ ದೊರೆಯಬಹುದು. ಆದರೆ ಆಧ್ಯಾತ್ಮಿಕವಾಗಿ ನಮ್ಮ ದೇಶ ಮುಂಚೂಣಿಯಲ್ಲಿದೆ. ಆಧ್ಯಾತ್ಮಿಕ ಶಕ್ತಿ ಮನುಷ್ಯನಲ್ಲಿ ಚೈತನ್ಯವನ್ನುಂಟು ಮಾಡುತ್ತದೆ. ಸಾರ್ವಕಲಿಕ ಸತ್ಯವನ್ನು ಆಧ್ಯಾತ್ಮದಲ್ಲಿ ಕಾಣಬಹುದು. ಆಧ್ಯಾತ್ಮಿಕ ಅನುಸಂಧಾನ ಮನುಷ್ಯನಲ್ಲಿ ಅಂತರ್ಗತ ಶಕ್ತಿ ಹೆಚ್ಚಿಸುತ್ತದೆ ಎಂದು ಡಾ. ಮಹಾಂತಪ್ರಭು ಮಹಾಸ್ವಾಮಿಗಳು ನುಡಿದರು.