ಜಲಂಧರ್: ಪಂಜಾಬ್‌ನ ಜಲಂಧರ್‌ನಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಹಸಿವಿನಿಂದ ಅಳುತ್ತಿದ್ದ ತನ್ನ ಐದು ವರ್ಷದ ಮಗಳ ಬಾಯಿಗೆ ಆಲ್ಕೋಹಾಲ್ ಸುರಿದು ಬಳಿಕ ಕತ್ತು ಹಿಸುಕಿ ತಂದೆಯೇ ಆಕೆಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಛತ್ತೀಸ್‌ಗಢ ಮೂಲದ ಅರವಿಂದ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಲಂಧರ್‌ನಲ್ಲಿ ವಾಸವಾಗಿದ್ದ ಅರವಿಂದ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಮದ್ಯಪಾನಕ್ಕೆ ಅತಿಯಾದ ಆಸಕ್ತಿ ಹೊಂದಿದ್ದ ಎನ್ನಲಾಗಿದೆ. ಘಟನೆ ನಡೆದ ಸಮಯದಲ್ಲಿ ಐದು ವರ್ಷದ ಬಾಲಕಿಯ ತಾಯಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹಸಿವಿನಿಂದ ಅಳುತ್ತಿದ್ದ ಮಗಳನ್ನು ಸುಮ್ಮನಾಗಿಸಲು ಆಕೆಯ ಬಾಯಿಗೆ ಆಲ್ಕೋಹಾಲ್ ಸುರಿದಿದ್ದಾನೆ. ಆದರೂ ಮಗು ಅಳುವುದನ್ನು ನಿಲ್ಲಿಸದಿದ್ದಾಗ ಕೋಪಗೊಂಡ ಆತ ಆಕೆಯನ್ನು ನೆಲಕ್ಕೆ ಎಸೆದಿದ್ದಾನೆ.
ಇದಕ್ಕೂ ಮಗು ಅಳುತ್ತಲೇ ಇದ್ದಾಗ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನೆರೆಮನೆಯ ನಿವಾಸಿ ಹಿಮ್ಮತ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ, ಆರೋಪಿಗೆ ಸ್ಥಿರ ಉದ್ಯೋಗ ಇರಲಿಲ್ಲ ಹಾಗೂ ಕುಡಿತದ ಅಮಲಿನಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಆಗಾಗ ದೈಹಿಕ ದೌರ್ಜನ್ಯ ನಡೆಸುತ್ತಿದ್ದ ಎಂಬುದು ತಿಳಿದುಬಂದಿದೆ. ಕೌಟುಂಬಿಕ ಕಲಹಗಳು ಮತ್ತು ಆರ್ಥಿಕ ಸಂಕಷ್ಟಗಳಿಂದ ಕುಟುಂಬ ತೀವ್ರ ಒತ್ತಡದಲ್ಲಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯಿಂದ ಬಾಲಕಿಯ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗುವಿನ ಶವವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.



