ಬೆಂಗಳೂರು:- ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಓರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯಲ್ಲಿ ಜರುಗಿದೆ. ಕೊಲೆಯಾದ ರೌಡಿಶೀಟರ್ ನನ್ನು ಪುನೀತ್ @ ನೇಪಾಳಿ ಪುನೀತ್ ಎಂದು ಗುರುತಿಸಲಾಗಿದೆ. ಕೊಲೆಯಾಗಿರುವ ಪುನೀತ್ ಕಾಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಕಾಡುಗೋಡಿ ಠಾಣೆ ರೌಡಿಶೀಟರ್ ಶ್ರೀಕಾಂತ್&ಟೀಂನಿಂದ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಶ್ರೀಕಾಂತ್ ಹಾಗೂ ರೌಡಿಶೀಟರ್ ಪುನೀತ್ ನಡುವೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಆಗುತ್ತಿತ್ತು. ಪುನೀತ್, ಶ್ರೀಕಾಂತ್‌ನನ್ನು ಕೊಲೆ ಮಾಡುವುದಾಗಿ ಎಲ್ಲರ ಮುಂದೆ ಹೇಳಿಕೊಂಡು ಓಡಾಡುತ್ತಿದ್ದ. ಅದನ್ನೇ ಶ್ರೀಕಾಂತ್ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ. ಮಂಗಳವಾರ ರಾತ್ರಿ ಕಾಡುಗೋಡಿಯ ವಿಜಲಕ್ಷ್ಮೀ ಲೇಔಟ್ ಬಳಿ ಪುನೀತ್ ಇರುವಾಗ ಬೈಕ್‌ನಲ್ಲಿ ಬಂದ ನಾಲ್ವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.