ಬೆಂಗಳೂರು:- ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಣ್ಣು ಕೊಟ್ಟ ಮಾವನನ್ನು ಅಳಿಯ ಕೊಲೆ ಮಾಡಿದರೆ, ಗಂಡನ ಶವವನ್ನು ಹೆಂಡತಿ ಮತ್ತು ಮಗಳು ಸುಟ್ಟು ಹಾಕಿರುವಂತಹ ಘಟನೆ ಬೆಳಕಿಗೆ ಬಂದಿದೆ.
48 ವರ್ಷದ ಬಾಬು ಮೃತ ಮಾವ. ಇವರು ದೇವನಹಳ್ಳಿ ಮೂಲದವರು. ಅಳಿಯ ರಾಮಕೃಷ್ಣ, ಬಾಬು ಪತ್ನಿ ಮುನಿರತ್ನ ಮತ್ತು ಪುತ್ರಿಯಿಂದ ಕೃತ್ಯವೆಸಗಲಾಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ವರ್ಷದಿಂದ ಕಾಡುಗೋಡಿಯಲ್ಲಿ ಕುಟುಂಬ ವಾಸವಿತ್ತು. ಗೋದಾಮು ಒಂದರಲ್ಲಿ ಬಾಬು ಕೆಲಸ ಮಾಡಿಕೊಂಡಿದ್ದ. 3 ತಿಂಗಳ ಹಿಂದೆ ಪ್ರೀತಿಸಿ ರಾಮಕೃಷ್ಣನನ್ನು ಬಾಬು ಪುತ್ರಿ ಮದುವೆಯಾಗಿದ್ದಳು. ಮಗಳು ಆತನನ್ನು ಮದುವೆಯಾಗಿದ್ದು ಬಾಬುಗೆ ಇಷ್ಟವಿರಲಿಲ್ಲ.
ಜುಲೈ 26ರಂದು ಬಾಬು ಮನೆಗೆ ಬಂದಿದ್ದ ಮಗಳು ಹಾಗೂ ರಾಮಕೃಷ್ಣಗೆ ಬಾಯಿಗೆ ಬಂದಂತೆ ಬೈದಿದ್ದ. ಗಲಾಟೆ ವೇಳೆ ಪತ್ನಿ ಮುನಿರತ್ನ ಕಪಾಳಕ್ಕೂ ಹೊಡೆದಿದ್ದ. ಈ ವೇಳೆ ಅತ್ತೆಗೆ ಹೊಡಿತೀಯಾ ಅಂತಾ ಬಾಬುಗೆ ರಾಮಕೃಷ್ಣ ಕಪಾಳಮೋಕ್ಷ ಮಾಡಿದ್ದು, ಅಳಿಯ ಹೊಡೆದ ಏಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ.
ಆಗ ಮೂವರು ಪ್ಲ್ಯಾನ್ ಮಾಡಿ ಸಂಬಂಧಿಕರೊಬ್ಬರ ಆ್ಯಂಬುಲೆನ್ಸ್ ತರಿಸಿದ್ದು, ಮುಂಜಾನೆ 3 ಗಂಟೆಗೆ ಬಾಬು ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿ ಕೋಲಾರಕ್ಕೆ ಶವ ರವಾನೆ ಮಾಡಿದ್ದಾರೆ. ಕೋಲಾರ ಬಳಿ ಪೆಟ್ರೋಲ್ ಸುರಿದು ಬಾಬು ಶವ ಸುಟ್ಟು ಆರೋಪಿಗಳು ಮನೆಗೆ ಬಂದಿದ್ದಾರೆ.
ಇದೆಲ್ಲವನ್ನ ನೋಡಿದ್ದ ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರ ಬಳಿ ಹೇಳಿದ್ದಾಳೆ. ಬಾಬು ಸಹೋದರ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಪೊಲೀಸರು, ಮೂವರನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಸತ್ಯತೆ ಹೊರ ಬಿದ್ದಿದೆ.