ಬೆಂಗಳೂರು:- ಹೊಸಕೋಟೆ ತಾಲೂಕಿನ ಕಟ್ಟಿಗಾನಹಳ್ಳಿಯಲ್ಲಿ 500ರೂ ಗಾಂಜಾಕ್ಕಾಗಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜರುಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಮೋಹಿನ್ ಎಂದು ಗುರುತಿಸಲಾಗಿದೆ. ಮೋಹಿನ್ ಗಾಂಜಾ ವ್ಯಸನಿಯಾಗಿದ್ದರಿಂದ ರೋಶನ್‌ಗೆ ಗಾಂಜಾ ತರಲು 500 ರೂ. ಹಣವನ್ನು ನೀಡಿದ್ದ. ಆದರೆ ರೋಷನ್ ಗಾಂಜಾ ತರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಗೆ ಹೋಗಿದ್ದ. ಮೋಹಿನ್, ರೋಷನ್‌ನ ಮನೆಯ ಬಳಿ ಹೋಗಿ ಬಾಗಿಲು ಬಡಿದರೂ ಬಾಗಿಲು ತೆರೆಯದಿದ್ದರಿಂದ ವಾಪಾಸ್ ಹೋಗಿದ್ದ.
ಅರ್ಧ ಗಂಟೆ ಬಿಟ್ಟು ವಾಪಾಸ್ ಮನೆಯ ಬಳಿ ತೆರಳಿದ ವೇಳೆ ಮೋಹಿನ್ ಹಾಗೂ ರೋಷನ್ ನಡುವೆ ಗಲಾಟೆ ನಡೆದಿದೆ. ಆಗ ರೋಷನ್ ಚಾಕುನಿಂದ ಮೋಹಿನ್‌ನ ಎದೆ, ಪಕ್ಕೆಲುಬು ಭಾಗಕ್ಕೆ 3 ಬಾರಿ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಮೋಹಿನ್‌ನನ್ನು ಸ್ನೇಹಿತರು ಮಾಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾಲೂರು ಆಸ್ಪತ್ರೆ ವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಮೋಹಿನ್ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.