ಗದಗ: ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಗೆ ಸಾಕಷ್ಟು ಹಾನಿ ಸೃಷ್ಟಿ ಆಗಿದ್ದು, ಬೆಳೆದ ಬೆಳೆ ಹಾಳಾಗಿ ರೈತರು ಕೂಡ ಕಂಗಾಲಾಗಿದ್ದಾರೆ.
ಈ ಹಿನ್ನೆಲೆ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಹೆಚ್ ಕೆ ಪಾಟೀಲ್ ಅವರು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಪರಿಹಾರದ ಭರವಸೆ ನೀಡಿದ್ದಾರೆ.
ಎಸ್, ಹವಾಮಾನ ಬದಲಾವಣೆ ಮತ್ತು ನಿರಂತರ ಮಳೆಯ ಪರಿಣಾಮವಾಗಿ ರೈತರ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗುತ್ತಿದೆ. ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದ ಬೆಳೆ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಇಂದು ಬೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು.
ಬಿಂಕದಕಟ್ಟಿ ರೈತ ಶ್ರೀನಿವಾಸ್ ಇಟಗಿ ಅವರ 10 ಎಕರೆಯ ಹೊಲದಲ್ಲಿನ ಹೆಸರು ಬೆಳೆ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ ಸಚಿವರು ಬೆಳೆಹಾನಿ ವೀಕ್ಷಣೆ ನಡೆಸಿ ಪರಿಹಾರದ ಭರವಸೆ ನೀಡಿದರು. ಹೊಲದಲ್ಲಿ ಹೆಸರು ಬೆಳೆ ಅಧಿಕ ಮಳೆಯಿಂದ ಹಾಳಾದ ದೃಶ್ಯವನ್ನು ಕಂಡ ಸಚಿವರು, ರೈತರಿಗೆ ತಕ್ಷಣ ಪರಿಹಾರ ಒದಗಿಸುವ ಭರವಸೆ ನೀಡಿ, ಈ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ನಿಖರ ಸಮೀಕ್ಷೆ ನಡೆಸಿ ಹಾನಿಗೊಳಗಾದ ಪ್ರತಿ ಎಕರೆಯ ಲೆಕ್ಕವನ್ನು ದಾಖಲಿಸುವಂತೆ ಸೂಚನೆ ನೀಡಿದರು. ರೈತರ ಕಷ್ಟವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಅವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ದೊರೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.
ಹೆಸರು ಬೆಳೆ ಬಿತ್ತನೆಗೆ ರೈತರು ಹೆಚ್ಚಿನ ವೆಚ್ಚ ಮಾಡಿರುವಾಗ, ನಿರಂತರ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿದೆ. ಒಂದು ಎಕರೆಗೆ ಹತ್ತಾರು ಸಾವಿರ ರೂಪಾಯಿ ವೆಚ್ಚ ಮಾಡುವ ರೈತರಿಗೆ ಬೆಳೆ ಹಾನಿ ಜೀವನಾಧಾರಕ್ಕೆ ದೊಡ್ಡ ಹೊಡೆತವಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹಾನಿ ಅಂಕಿ-ಅಂಶಗಳನ್ನು ಸರಿಯಾಗಿ ಸಂಗ್ರಹಿಸುವಂತೆ ಹಾಗೂ ರೈತರಿಗೆ ಶೀಘ್ರ ಪರಿಹಾರ ಒದಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸೂಚಿಸಿದರು.
ಬೆಳೆ ಹಾನಿ :* ಗದಗ ಜಿಲ್ಲೆಯಲ್ಲಿ ಆ.1 ರಿಂದ 18 ವರೆಗೆ ವಾಡಿಕೆಮಳೆ 46.9 ಎಂ ಎಂ ಇತ್ತು, 140.2 ರಷ್ಟು ಮಳೆ ಆಗುವ ಮುಲಕ ಶೇ.198.9 ರಷ್ಟು ಅಧಿಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 292826 ಹೆಕ್ಟರ್ ಬಿತ್ತನೆ ಮಾಡಲಾಗಿತ್ತು, 94884 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಇದರಲ್ಲಿ ಹೆಸರು ಬೆಳೆ 67533 ಹೆ ಹಾನಿಯಾಗಿದೆ ಎಂದು ಪ್ರಾಥಮಿಕ ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ. ಇನ್ನು ಸಮೀಕ್ಷಾಕಾರ್ಯ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಜಿಲ್ಲೆಯಲ್ಲಿ 24000 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈವರೆಗೆ 9800 ಹೆಕ್ಟೇರ ಪ್ರದೇಶ ಹಾನಿಯಾಗಿದೆ. ಸಮೀಕ್ಷೆ ಕಾರ್ಯ ಮುಂದುವರಿದಿದೆ. ಗದಗ ತಾಲೂಕಿನಲ್ಲಿ ಈರುಳ್ಳಿ 802 ಹೆಕ್ಟರ್, ಮೆಣಸಿನಕಾಯಿ 3273 ಹೆಕ್ಟರ್ ಹಾನಿಗೊಳಗಾಗಿದ್ದು, ಗದಗ ತಾಲೂಕ್ ಒಂದರಲ್ಲಿಯೇ 4075 ಹೆಕ್ಟರ್ ಪ್ರದೇಶ ಹಾನಿಗೊಳಗಾಗಿದೆ ಎಂದು ಪ್ರಾಥಮಿಕ ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಸಹಾಯಕ ಆಯುಕ್ತ ಗಂಗಪ್ಪ ಎಂ., ತಹಶೀಲ್ದಾರ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದಾರ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.