ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕಳೆದ ವಾರ ಸುರಿದ ಮಳೆ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ರೈತರು ಬೆಳೆದ ಉಳ್ಳಾಗಡ್ಡಿ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳ ಹಾನಿಯನ್ನು ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಎಎಚ್‌ಒ ಚಿದಾನಂದ ಕಳಕಾಪೂರ, ನರೇಗಲ್ಲ ರೈತ ಸಂಪರ್ಕ ಕೇಂದ್ರದ ಚಿದಾನಂದ ಕಮ್ಮಾರ, ಗ್ರಾಮ ಲೆಕ್ಕಾಧಿಕಾರಿ ದಾವಲ ಇಟಗಿ ಬುಧವಾರ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತರಾದ ಕುಮಾರ ಮಲ್ಲನಗೌಡ್ರ ಮಾತನಾಡಿ, ಈ ಭಾಗದ ಪ್ರಮುಖ ತೋಟಗಾರಿಕೆ ಬೆಳೆಯಾದ ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿ ಬೆಳೆಗಳು ಸತತ ಮಳೆಯಿಂದಾಗಿ ಕೊಳೆತು ಹೋಗಿವೆ. ಇನ್ನೇನು ಉಳ್ಳಾಗಡ್ಡಿ ಕಟಾವು ಮಾಡಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಮಳೆಯಾಗಿ ಸಾಕಷ್ಟು ಹಾನಿಯಾಗಿದೆ.
ಹಿಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಬಿತ್ತನೆ ಮಾಡಿದ ಬೀಜ ಭೂಮಿಯಲ್ಲಿ ಮೊಳಕೆ ಒಡೆದು ಅಲ್ಲೇ ಕಮರಿ ಹೋಗಿದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ರೈತರಿಗೆ ಪರಿಹಾರ ಮತ್ತು ಬೆಳೆ ವಿಮೆ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡದೆ ಅದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಮಾತನಾಡಿ, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಬೆಳೆ ಹಾನಿ ಪರಿಶೀಲನೆ ಕೈಗೊಳ್ಳುತ್ತಿದ್ದು, ಬೆಳೆ ಹಾನಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಮುಗಳಿ, ನರೇಶ ಜೋಳದ, ಹನಮಂತ ತಳವಾರ ಸೇರಿದಂತೆ ಇತರರಿದ್ದರು.