ವಿಜಯಸಾಕ್ಷಿ ಸುದ್ದಿ, ಗದಗ : ಮುಂಗಾರು ಹಂಗಾಮಿನ 2024-25ನೇ ಸಾಲಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲಾ ರೈತರು ತಾವು ಬೆಳೆದ ಬೆಳೆಗಳ ವಿವರವನ್ನು ತಾವೇ ಸ್ವತಃ ತಮ್ಮ ಜಮೀನಿನಲ್ಲಿ ನಿಂತು ಗೂಗಲ್ ಪ್ಲೇಸ್ಟೋರ್‌ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2024ನ್ನು ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರವನ್ನು ದಾಖಲಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಈ ಬೆಳೆ ಸಮೀಕ್ಷೆ ವಿವರಗಳು ಕನಿಷ್ಠ ಬೆಂಬಲ ಯೋಜನೆಯಲ್ಲಿ ತಾವು ಬೆಳೆದ ಕಾಳುಗಳನ್ನು ಮಾರಾಟ ಮಾಡಬಹುದು, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಪಡೆಯಲು, ಪಹಣಿ ಉತಾರದಲ್ಲಿ ವಿವರಗಳನ್ನು ದಾಖಲಿಸುವುದು ಹಾಗೂ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆಯಲು ಕಡ್ಡಾಯವಾಗಿರುತ್ತದೆ.
ರೈತರು ಬೆಳೆಯ ವಿವರಗಳನ್ನು ಅಪ್ಲೋಡ್ ಮಾಡದಿದ್ದಲ್ಲಿ ಸರ್ಕಾರದ ಬರುವ ಯೋಜನೆಗಳ ಲಾಭದಿಂದ ವಂಚಿತರಾಗಿರುವ ಸಾಧ್ಯತೆಗಳಿವೆ ಎಂದು ಅವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.