ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮತಕ್ಷೇತ್ರ ವ್ಯಾಪ್ತಿಯಲ್ಲಿ ರೈತರು ಪ್ರಕೃತಿ ವಿಕೋಪದಿಂದ ಸತತವಾಗಿ ಹಾನಿಯನ್ನು ಅನುಭವಿಸುತ್ತಿದ್ದು, ಇವುಗಳ ನೈಜ ಮಾಹಿತಿಯನ್ನು ವರದಿ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಬೆಳೆ-ಹಾನಿ ಮತ್ತು ಬೆಳೆ ಸಮೀಕ್ಷೆ ವರದಿಯಲ್ಲಿ ಲೋಪದೋಷವಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆಯಲ್ಲಿ ನಡೆಯುವ ಬೆಳೆ ಸಮೀಕ್ಷೆಯು ಪಾರದರ್ಶಕವಾಗಿ ನಡೆಯುತ್ತಿಲ್ಲ. ಇದರ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿದ್ದು, ನೀವು ನೋಡಲ್ ಅಧಿಕಾರಿಯಾಗಿ ಯಾಕೆ ಸಮರ್ಪಕ ಪರಿಶೀಲನೆ ನಡೆಸುತ್ತಿಲ್ಲ, ಸಮೀಕ್ಷೆಯಲ್ಲಿ ವ್ಯತ್ಯಾಸವಾದರೆ ನಿಮ್ಮನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ರೇವಣೆಪ್ಪ ಮನಗೂಳಿ ಅವರನ್ನು ಕೇಳಿದಾಗ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿ ಶಾಸಕ ಮತ್ತು ಎಡಿಎ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಎಡಿಎ ಸಭೆಯಿಂದ ಹೊರಕ್ಕೆ ಹೋಗುವಂತೆ ಶಾಸಕ ಡಾ ಲಮಾಣಿ ಸೂಚನೆ ನೀಡಿದರು.
ತಾಲೂಕಿನ ನೋಡಲ್ ಅಧಿಕಾರಿ ಇದಕ್ಕೆ ನಾನು ಜವಾಬ್ದಾರಿಯಲ್ಲ ಎನ್ನುತ್ತಿದ್ದು, ನಮ್ಮ ತಾಲೂಕಿಗೆ ಬೇರೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಕೃಷಿ ಇಲಾಖೆಯ ಜೆಡಿ ಮತ್ತು ಡಿಡಿ ಅವರಿಗೆ ಪತ್ರ ಬರೆಯಲು ಸೂಚಿಸಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾ.ಪಂ ಆಡಳಿತಾಧಿಕಾರಿ ಸಿ.ಆರ್. ಮುಂಡರಗಿ, ತಾ.ಪಂ ಇಓ ಡಾ. ಆರ್.ವಿ. ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಾ ಕೇಂದ್ರದಲ್ಲಿ ನಡೆಯುವ ಬಹುತೇಕ ಅಧಿಕಾರಿ ಗೈರು ಉಳಿಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ಸರಕಾರದ ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಎಲ್ಲ ಅಧಿಕಾರಿಗಳು ಎಲ್ಲ ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕೆಂದು ಶಾಸಕ ಡಾ: ಲಮಾಣಿ ಹೇಳಿದರು.