ಚಿಕ್ಕಮಗಳೂರು: ಕಾಫಿನಾಡಲ್ಲಿ ಸಾಗರ ದಾಟಿ ಬಂದ ಅಪರೂಪದ ಪ್ರೇಮಕಥೆಯೊಂದು ಇದೀಗ ಮದುವೆಯಾಗಿ ಮುಕ್ತಾಯ ಕಂಡಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ರೂಪಕ್ ಹಾಗೂ ಚೀನಾ ಮೂಲದ ಯುವತಿ ಜಡೆ ಪ್ರೀತಿಯ ಮೂಲಕ ಒಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ, ಬಳಿಕ ಅದೇ ಪ್ರೀತಿ ಮದುವೆಯವರೆಗೆ ತಲುಪಿದೆ. ಕಾಫಿನಾಡ ಹುಡುಗ ಮತ್ತು ಚೀನಾ ಹುಡುಗಿ ಆಸ್ಟ್ರೇಲಿಯಾದಲ್ಲಿ ಪ್ರೀತಿಸಿ, ಭಾರತದಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಇವರ ಅದ್ಧೂರಿ ವಿವಾಹ ಸಮಾರಂಭವು ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಚೀನಾ ಮೂಲದ ಯುವತಿ ಜಡೆ ಕೈಹಿಡಿದ ರೂಪಕ್ಗೆ, ವಧುವಿನ ತಂದೆ-ತಾಯಿ ಚೀನಾದಿಂದಲೇ ಆಗಮಿಸಿ ಧಾರೆ ಎರೆದಿದ್ದು ವಿಶೇಷವಾಗಿತ್ತು.
ಭಾರತ ಮತ್ತು ಚೀನಾದ ಸಂಪ್ರದಾಯಗಳಲ್ಲಿ ಹಲವು ಸಾಮ್ಯತೆಗಳಿವೆ ಎಂದು ಹೇಳಿದ ಜಡೆ, ಎರಡು ದೇಶಗಳ ಸಂಸ್ಕೃತಿಯ ಒಗ್ಗೂಡಿಕೆಗೆ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಚಿಕ್ಕಮಗಳೂರಿನ ನೈಸರ್ಗಿಕ ಸೌಂದರ್ಯ ನೋಡಿ ಫಿದಾ ಆಗಿರುವುದಾಗಿ ಹೇಳಿದರು.
ಇಬ್ಬರ ಮದುವೆಗೆ ಕುಟುಂಬಸ್ಥರು ಸಂಪೂರ್ಣ ಒಪ್ಪಿಗೆ ನೀಡಿದ್ದು, ಸಂಬಂಧಿಕರೆಲ್ಲರನ್ನು ಕರೆದು ರೂಪಕ್ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಯುವಕ-ಯುವತಿ ಇಬ್ಬರೂ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ. ಕಾಫಿನಾಡಲ್ಲಿ ನಡೆದ ಈ ಭಾರತ–ಚೀನಾ ಪ್ರೇಮವಿವಾಹವು ಎಲ್ಲರ ಗಮನ ಸೆಳೆದಿದೆ.



