ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಜಡಚರ್ಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಮತ್ತು ವಿಜಯಪುರ ಮೂಲದ ಮಹದೇವಪ್ಪ (65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ಗೋಗಿ ಗ್ರಾಮ ನಿವಾಸಿಗಳಾಗಿದ್ದಾರೆ.
ಕುಟುಂಬವು ನಿನ್ನೆ (ಶುಕ್ರವಾರ) ಯಾದಗಿರಿ ನಗರದಲ್ಲಿ ಮೊಮ್ಮಗನ ಜವಳ ಮುಗಿಸಿಕೊಂಡು ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಕ್ರೂಸರ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ತಡೆಗೋಡೆಗೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದು ಬಂದಿದೆ. ಕಾರು ಚಲಿಸುತ್ತಿದ್ದ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.



