ಧರ್ಮದ ಉಳಿವಿಗಾಗಿ ಧರ್ಮಯುದ್ಧ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ ನಡೆಯುತ್ತಿದೆ. ಹಿಂದೂಗಳ ಆರಾಧ್ಯ ದೇವಸ್ಥಾನಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಎಡಪಂಥೀಯರ ಮಾತನ್ನು ಕೇಳುತ್ತಾ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಮಾತನಾಡಿದ ರಾಜು ಕುರಡಗಿ, ಶ್ರೀಕ್ಷೇತ್ರ ಧರ್ಮಸ್ಥಳವು ಕೇವಲ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಾಂತರ ಭಕ್ತಾಧಿಗಳನ್ನು ಹೊಂದಿದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ. ಹಿಂದೂಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಅವಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಹಾಗೂ ಎಡಪಂಥೀಯರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದರ ಹಿಂದೆ ಹಿಂದೂಗಳ ಶ್ರದ್ಧಾ ಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರವಿದೆ. ಇಂತಹ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರವೂ ನಡೆದಿದೆ. ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಹೇಳಿದ ಕಡೆಗಳಲ್ಲೆಲ್ಲಾ ಗುಂಡಿಗಳನ್ನು ತೋಡಿದೆ. ಆದರೆ, ಈ ಅನಾಮಿಕನ ಹಿಂದಿರುವ ದುಷ್ಟ ವ್ಯಕ್ತಿಗಳು ಯಾರು ಮತ್ತು ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ಈವರೆಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ತಿಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ಮಹೇಶ ದಾಸರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ, ಗದಗ-ಬೆಟಗೇರಿ ಶಹರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮೀ ಮಾನ್ವಿ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ನಾಗರಾಜ ತಳವಾರ, ಅನಿಲ ಅಬ್ಬಿಗೇರಿ, ಮುತ್ತಣ್ಣ ಮುಶಿಗೇರಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

 

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅವಮಾನಿಸುತ್ತಿರುವ ಸಮಾಜ ವಿರೋಧಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಒಳಪಡಿಸಬೇಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಕ್ತಿ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಂತಹ ದುಷ್ಕೃತ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ರಾಜು ಕುರಡಗಿ ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here