ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಧೋನಿ ನಾಯಕತ್ವದ ಸಿಎಸ್ ಕೆ ತಂಡವು ಹೀನಾಯವಾಗಿ ಸೋತಿದೆ. ಈ ಮೂಲಕ ತವರಲ್ಲೇ CSK ತಂಡಕ್ಕೆ ಭಾರೀ ಮುಖಭಂಗವಾಗಿದೆ.
ಸುನಿಲ್ ನರೈನ್ ಅವರ ಆಲ್-ರೌಂಡ್ ಪ್ರದರ್ಶನದ ಆಧಾರದ ಮೇಲೆ ಕೆಕೆಆರ್, ಸಿಎಸ್‌ಕೆ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ನರೈನ್ ಅವರ ಮಾರಕ ದಾಳಿಗೆ ನಲುಗಿ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 103 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುರಿ ಬೆನ್ನಟ್ಟಿದ ಕೆಕೆಆರ್ ಪರ ಅದ್ಭುತ ಬ್ಯಾಟಿಂಗ್ ಮಾಡಿದ ನರೈನ್ 18 ಎಸೆತಗಳಲ್ಲಿ 44 ರನ್ ಗಳಿಸಿದರು. ಇದರ ಸಹಾಯದಿಂದ ಕೆಕೆಆರ್ 10.1 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 107 ರನ್ ಗಳಿಸುವ ಮೂಲಕ ಜಯ ಸಾಧಿಸಿತು.
ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಗಳು ಸಂಘಟಿತ ದಾಳಿ ನಡೆಸಿದರು. ಸುನಿಲ್ ನರೈನ್ 3, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಗಳಿಸಿದರು. ಇನ್ನು ಉಳಿದೆರಡು ವಿಕೆಟ್ ಗಳನ್ನು ವೈಭವ್ ಅರೋರಾ ಮತ್ತು ಮೊಯಿನ್ ಅಲಿ ಹಂಚಿಕೊಂಡರು. ಆಲ್ರೌಂಡ್ ಪ್ರದರ್ಶನ ನೀಡಿದ ಸುನಿಲ್ ನರೈನ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.