ಧಾರವಾಡ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಹಿನ್ನೆಲೆ ಬಿಜೆಪಿ MLC ಸಿಟಿ ರವಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
CT ರವಿ ಬಂಧನ ಆಗುತ್ತಿದ್ದಂತೆ ರಾಜ್ಯದೆಲ್ಲೆಡೆ ಬಿಜೆಪಿ ಕೆಂಡಾಮಂಡಲವಾಗಿದೆ. ಅದರಂತೆ ಸಿ.ಟಿ.ರವಿ ಅವರ ಬಂಧನ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹೈಡ್ರಾಮಾ ಸೃಷ್ಟಿಯಾಗಿದೆ.
ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಟೈರ್‌ಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಈ ವೇಳೆ ಪೊಲೀಸರು ಆ ಭಾವಚಿತ್ರ ಹಾಗೂ ಟೈರ್‌ಗೆ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರು.
ಈ ವೇಳೆ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಬೆಂಕಿ ಮೇಲೆ ನೀರು ಹಾಕದಂತೆ ತಡೆಯೊಡ್ಡಿದರು. ಪೊಲೀಸರ ಕೈಯಲ್ಲಿದ್ದ ನೀರಿನ ಕ್ಯಾನ್ ತೆಗೆದು ಒಗೆಯಲು ಪ್ರತಿಭಟನಾಕಾರರು ಪ್ರಯತ್ನಿಸಿದರು. ಈ ವೇಳೆ ಹೈಡ್ರಾಮಾವೇ ಸೃಷ್ಟಿಯಾಯಿತು.