ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿದ್ಯಾರ್ಥಿಗಳಳು ಕೇವಲ ಅಂಕಗಳ ದಾಸರಾಗಬೇಡಿ. ಅಂಕಗಳಿಕೆ ನಿಮ್ಮ ಭವಿಷ್ಯಕ್ಕೆ ಅವಶ್ಯಕ. ಅದಕ್ಕಿಂತಲೂ ಮುಖ್ಯವಾದುದು ಮಾನವೀಯತೆ ಮತ್ತು ಮೌಲ್ಯಗಳು. ಆದ್ದರಿಂದ ನಿಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಹೇಳಿದರು.
ಪಟ್ಟಣದ ಕೆಜಿಎಂಎಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ತಮ್ಮ ಜವಾಬ್ದಾರಿಯನ್ನರಿತು ಪಾಲಕರು ಮಕ್ಕಳನ್ನು ಬೆಳೆಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದರು.
ಡಯಟ್‌ನ ಉಪನ್ಯಾಸಕ ಕೆ.ಪಿ. ಸಾಲಿಮಠ ಮಾತನಾಡಿ, ಈಗ ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲ. ಇಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಒಂದು ಸರಕಾರಿ ಪ್ರಾಥಮಿಕ ಶಾಲೆ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬುದಕ್ಕೆ ನರೇಗಲ್ಲದ ಕೆಜಿಎಂಎಸ್ ಶಾಲೆ ಉತ್ತಮ ಉದಾಹರಣೆಯಾಗಿದೆ ಎಂದರು.
ಬಿಆರ್‌ಪಿ ಈರಪ್ಪ ಮಾದರ ಮಾತನಾಡಿ, ಸರಕಾರ ನಿಮಗಾಗಿ, ನಿಮ್ಮ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ವೇದಿಕೆಯ ಮೇಲೆ ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣುಕಾ ಜೋಗಿ, ಪ.ಪಂ ಸದಸ್ಯ ಶೇಖಪ್ಪ ಕೆಂಗಾರ, ಗಣೇಶ ನವಲಗುಂದ, ಬಸವರಾಜ ಮಣ್ಣೊಡ್ಡರ, ಎಂಸಿಎಸ್ ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮರೆಡ್ಡಿ ಬಂಡಿವಡ್ಡರ, ಅಂದಾನಗೌಡ ಲಕ್ಕನಗೌಡ್ರ, ತಾಲೂಕಾ ದೈಹಿಕ ಪರೀವೀಕ್ಷಕ ಆರ್.ಎಸ್. ನರೇಗಲ್ಲ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ನಿವೃತ್ತ ಸೈನಿಕ ದಿನೇಶ ಕೋಗಿಲೆ ಇನ್ನಿತರರಿದ್ದರು.
ಮುಖ್ಯಾಧ್ಯಾಪಕ ಬಿ.ಬಿ. ಕುರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಎನ್. ಲ್. ಚವ್ಹಾಣ ನಿರೂಪಿಸಿದರು. ಶಿಕ್ಷಕ ಜೆ.ಎ. ಪಾಟೀಲ ಸ್ವಾಗತಿಸಿದರೆ, ಎಂ.ಎಸ್. ಮಾಳಶೆಟ್ಟಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿ, ನಮ್ಮ ಶಾಲೆಯ ಶಿಕ್ಷಕ ಬಳಗದವರ ಪ್ರಾಮಾಣಿಕ ಸೇವೆಯಿಂದ ಪಟ್ಟಣದಲ್ಲಿ ನಮ್ಮ ಶಾಲೆಗೊಂದು ಉತ್ತಮ ಹೆಸರು ಬಂದಿದೆ. ದಾನಿಗಳೂ ಸಹ ಸಾಕಷ್ಟು ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾರೆ. ಇಲಾಖಾ ಅಧಿಕಾರಿಗಳೂ ಸಹ ನಮ್ಮ ಶಾಲೆಯ ಬಗ್ಗೆ ಅಭಿಮಾನವನ್ನು ಹೊಂದಿದ್ದು, ನಮಗೆ ವರದಾನವಾಗಿದೆ ಎಂದರು.