ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಮತ್ತು ಅವಿದ್ಯಾವಂತರಿಗಿಂತ ವಿದ್ಯಾವಂತರಲ್ಲಿಯೇ ಕೌಟುಂಬಿಕ ಕಲಹಗಳು, ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಬೆಲೆಬಾಳುವ ನಾಯಿಯನ್ನು ಸಾಕುವ ಜನ, ತಂದೆ-ತಾಯಿಯನ್ನು ಸಾಕದಿರುವುದು ನೋವಿನ ಸಂಗತಿ ಎಂದು ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.
ಭಾನುವಾರ ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ, ಶರಣಶ್ರೀ ಪ್ರಶಸ್ತಿ ಪ್ರದಾನ, ಭಕ್ತಿ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಗುರು-ಹಿರಿಯರನ್ನು ಗೌರವ, ಶ್ರದ್ಧೆಯಿಂದ ಕಾಣುವುದು ಇಂದಿನ ಅಗತ್ಯವಾಗಿದೆ. ಇಂದು ಅತಿಯಾದ ಮೊಬೈಲ್ ಬಳಕೆಯು ನಮಗೆ ಹೆಚ್ಚು ತೊಂದರೆದಾಯಕವಾಗಿದ್ದು, ದುಡಿದು ತಿನ್ನುವ ರೂಢಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿವಶಾಂತವೀರ ಶರಣರು ಮಾತನಾಡಿ, ಶ್ರೀಮಠದ ಜಾತ್ರೆ ಮನುಷ್ಯನ ಬದುಕನ್ನು ಖಾತ್ರಿಪಡಿಸುವ ಜಾತ್ರೆಯಾಗಿದೆ. ಇಲ್ಲಿ ಭಕ್ತ ಹಿತಚಿಂತನೆ ಮೂಲಕ ಜನರಲ್ಲಿ ಸದ್ಭಾವನೆ, ಸದ್ವಿಚಾರ ಬೆಳೆಸುವುದಾಗಿದೆ. ಸಮಾಜಮುಖಿಯಾಗಿ ಕಾರ್ಯಚಟುವಟಿಕೆ ಆಯೋಜಿಸುವುದು ಅವುಗಳ ಸದುಪಯೋಗ ಪಡೆದುಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದಾಗಿದೆ ಎಂದರು.
ಶರಣಶ್ರೀ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಮಾತನಾಡಿ, ರೈತ ಬೆಳೆಗಳನ್ನು ಬೆಳೆಯಲು ಕೇವಲ ಬೆವರು ಸುರಿಸುವುದಷ್ಟೇ ಅಲ್ಲ, ರಕ್ತವನ್ನೂ ಸುರಿಸುತ್ತಾನೆ ಎಂಬುದನ್ನು ಮನಗಾಣಬೇಕಾಗಿದೆ. ಬಿಸಿಲು-ಚಳಿ-ಮಳೆ ಎನ್ನದೇ ನಿರಂತರವಾಗಿ ದುಡಿದು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಅವಕಾಶ ಸಮಾಜ, ಸರ್ಕಾರ ನೀಡಿಲ್ಲ. ರೈತರು ಋತುಮಾನಾಧಾರಿತ ಬೆಳೆ ಪದ್ಧತಿಯನ್ನು ರೂಢಿಸಿಕೊಂಡು ಸಮಾಜದಲ್ಲಿ ಯಾರಿಗೂ ಕಡಿಮೆ ಇರದ ರೀತಿಯಲ್ಲಿ ಜೀವನ ಮಟ್ಟವನ್ನು ರೂಪಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಶ್ರೀಮಠದಲ್ಲಿ ಹರಕೆಯ ತೇರನ್ನು ಲೋಕಾರ್ಪಣೆಗೊಳಿಸಲಾಯಿತು. 36 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬಳೂಟಗಿಯ ಹಿರೇಮಠದ ಶಿವಕುಮಾರ ಸ್ವಾಮೀಜಿ, ರಬಕವಿಯ ಗುರುಸಿದ್ಧ ಸ್ವಾಮೀಜಿ, ಕಂಪಸಾಗರ ಅಭಿನವ ನಾಗಭೂಷಣ ಸ್ವಾಮೀಜಿ, ಹೆಬ್ಬಾಳದ ಪ್ರಕಾಶ ಶರಣರು, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ ಇದ್ದರು.
ಬೆಂಗಳೂರಿನ ಗಾಯಕ ಕಡುಬಗೆರೆಯ ಮುನಿರಾಜು ಹಾಗೂ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿತು. ಹನುಮಂತ ಅಲ್ಕೋಡ ಹಾಗೂ ತಂಡದಿಂದ ಭಕ್ತಿ ಸಂಗೀತ ಜರುಗಿತು. ಬಿ.ವೈ. ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಸವಿತಾ ಶಿವಕುಮಾರ ಸ್ವಾಗತಿಸಿ, ನಿರೂಪಿಸಿದರು. ಶಿವಲಿಂಗ ಶಾಸ್ತ್ರಿಗಳು ಸಿದ್ದಾಪುರ ನಿರೂಪಿಸಿದರು.
ಶರಣರ ಮಠ ಹಾಗೂ ನವಲಗುಂದದ ಸಿದ್ಧಲಿಂಗನಗೌಡ ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ಸಹಯೋಗದಲ್ಲಿ ಕೃಷಿ ಸಾಧಕಿ ರಾಯಚೂರಿನ ಕವಿತಾ ಮಿಶ್ರಾ, ಜಾನಪದ ಕಲಾವಿದ ಕಡುಬಗೆರೆ ಮುನಿರಾಜ, ಐಐಟಿ ಸಂಶೋಧನಾರ್ಥಿ ಅನ್ನಪೂರ್ಣ ಬಸಯ್ಯ ಬಳೂಲಮಠರಿಗೆ ಅವರಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.



