ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಊರು ಎಂದ ಮೇಲೆ ಅಲ್ಲಿ ತನ್ನದೇ ಆದ ಒಂದು ಸಾಂಸ್ಕೃತಿಕ ವಲಯ ಇದ್ದೇ ಇರುತ್ತದೆ. ಸಾಂಸ್ಕೃತಿಕ ವಲಯ ಇದ್ದ ಮೇಲೆ ಅಲ್ಲೊಂದು ಸಾಂಸ್ಕೃತಿಕ ಭವನ ಇದ್ದರೆ ಚೆಂದ ಎನ್ನುವ ದೃಷ್ಟಿಯಿಂದ ಮಾಜಿ ಸಂಸದ ಐ.ಜಿ. ಸನದಿಯವರು ನರೇಗಲ್ಲಿಗೊಂದು ಸಾಂಸ್ಕೃತಿಕ ಭವನ ಇರಲಿ ಎನ್ನುವ ಉದ್ದೇಶದಿಂದ ತಮ್ಮ ಅನುದಾನದಲ್ಲಿ ಗಾಂಧಿ ಭವನವನ್ನು ನಿರ್ಮಿಸಿದ್ದರು.
ಕೆಲವು ವರ್ಷಗಳವರೆಗೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಕ್ರಮಗಳು ನಡೆದು ಜನರ ಮನಸ್ಸಿಗೆ ನೆಮ್ಮದಿ ನೀಡಿದ್ದವು. ಆ ಸಮಯದಲ್ಲಿಯೆ ಪಟ್ಟಣ ಪಂಚಾಯಿತಿಯಿಂದ ಕೂಗಳತೆಯ ದೂರದಲ್ಲಿರುವ ಈ ಭವನವನ್ನು ಗೋಡೆಗಳಿಂದ ರಕ್ಷಿಸಿ, ಬಾಗಿಲನ್ನು ಹಚ್ಚಿ ಇದನ್ನು ಕಾಯ್ದುಕೊಳ್ಳಿ ಎಂದು ಪಟ್ಟಣದ ಸಾಂಸ್ಕೃತಿಕ ಸಂಘಟನೆಗಳು, ಸಾಹಿತಿಗಳು ಪಟ್ಟಣ ಪಂಚಾಯಿತಿಗೆ ಗೋಗರೆದರು. ಆದರೆ ಇದಾವುದನ್ನೂ ಕಿವಿಗೆ ಹಾಕಿಕೊಳ್ಳದ ಹಿಂದಿನ ಆಡಳಿತ ಮಂಡಳಿಗಳು ಅದರ ಕಡೆಗೆ ಲಕ್ಷö್ಯ ಕೊಡದೆ ಹೋದುದರಿಂದ ಗಾಂಧಿ ಭವನವೀಗ ಗಂಧೀ(ಹೊಲಸಿನ)ಭವನವಾಗಿದೆ. ಇಲ್ಲಿ ನಡೆಯಬಾರದ್ದು ನಡೆಯುತ್ತದೆ, ರೈತರು ಧಾನ್ಯಗಳನ್ನು ರಾಶಿ ಹಾಕುತ್ತಾರೆ. ತಮ್ಮ ವಾಹನಗಳ ಸುರಕ್ಷತೆಗಾಗಿ ಮಾಲೀಕರು ಇದನ್ನು ಪಾರ್ಕಿಂಗ್ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.
ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ ಹೇಳುವ ಪ್ರಕಾರ, ಗಾಂಧಿ ಭವನದ ನೆಲಹಾಸು ಕಿತ್ತು ಹೋಗಿದೆ. ವೇದಿಕೆಯ ಕಟ್ಟೆ ಒಡೆದಿದೆ, ಮೇಲಿನ ತಗಡುಗಳು ಹಾರಿ ಹೋಗಿವೆ, ಹಾಕಿರುವ ಕಬ್ಬಿಣದ ತೊಲೆಗಳೂ ತುಕ್ಕು ಹಿಡಿದಿವೆ. ಜನೇವರಿ 26ರ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಇಲ್ಲಿಯೇ ಮಾಡೋಣವೆಂದು ಈಗಿನ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯಾಧಿಕಾರಿ, ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗದಿರುವುದು ನಮಗೆ ಅತೀವ ಬೇಸರವನ್ನುಂಟು ಮಾಡಿದೆ. ಗಾಂಧಿ ಹೆಸರಿನ ಈ ಸಾಂಸ್ಕೃತಿಕ ಭವನ ಕಣ್ಣೆದುರಿಗೇ ಹಾಳಾಗುತ್ತಿರುವುದು ಮನಸ್ಸಿಗೆ ಬಹಳಷ್ಟು ನೋವನ್ನುಂಟು ಮಾಡಿದೆ.
ಈಗಲಾದರೂ ಜಿಲ್ಲಾಧಿಕಾರಿಗಳು ಇಲ್ಲಿಗೆ ಆಗಮಿಸಿ, ಗಾಂಧಿ ಭವನದ ಸ್ಥಿತಿಯನ್ನು ಪರಿಶೀಲಿಸಿ, ಈಗಿನ ಆಡಳಿತ ಮಂಡಳಿಯವರಿಗೆ ಮತ್ತು ಮುಖ್ಯಾಧಿಕಾರಿಗೆ ಸಾಂಸ್ಕೃತಿಕ ಮನಸ್ಸುಗಳ ಸಭೆ ಕರೆದು ಇದರ ರಕ್ಷಣೆ ಹೇಗೆ ಎನ್ನುವ ಕುರಿತು ಪಾಠ ಮಾಡಿ ಇದನ್ನೊಂದು ವಿಶೇಷತೆಯುಳ್ಳ ಸಾಂಸ್ಕೃತಿಕ ಭವನವನ್ನಾಗಿಸಲಿ ಎಂದು ಸಂಗನಾಳ ಆಗ್ರಹಿಸಿದ್ದಾರೆ. ಇಲ್ಲವಾದರೆ ನಿವೃತ್ತ ಸೈನಿಕ ಸಂಘದವರು, ಸಾಂಸ್ಕೃತಿಕ ಮನಸ್ಸುಗಳೆಲ್ಲರೂ ಸೇರಿ ಪಟ್ಟಣ ಪಂಚಾಯಿತಿ ಎದುರಿಗೆ ಧರಣಿ ಹೂಡುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.