ಲಂಬಾಣಿ ತಾಂಡಾಗಳಲ್ಲಿ ಸಂಪ್ರದಾಯದ `ಸೀತ್ಲಾ ಹಬ್ಬ’

0
Cultural festival celebration of Banjara community in various Lambani Tandas
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಬಂಜಾರ ಸಮಾಜದವರು ಆಚರಿಸುವ ಪ್ರತೀ ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆ, ಸಂಪ್ರದಾಯವಿರುತ್ತದೆ. ವಿಶಿಷ್ಟ ವೇಷ-ಭೂಷಣಗಳ ಜೊತೆಗೆ ವಿಶಿಷ್ಟ ಸಂಪ್ರದಾಯವನ್ನು ಈ ಸಮಾಜ ಹೊಂದಿದ್ದು, ಕ್ಷುದ್ರ ದೇವತೆಗಳನ್ನು ಸಂತೃಪ್ತಿಪಡಿಸಲು ಸೀತ್ಲಾ ದೇವತೆಯ ಹಬ್ಬವನ್ನು ಆಚರಿಸಲಾಗುತ್ತದೆ. ತಾಲೂಕಿನ ಕೊಂಡಿಕೊಪ್ಪ ತಾಂಡಾ ಸೇರಿದಂತೆ ರಾಜ್ಯದ ವಿವಿಧ ಲಂಬಾಣಿ ತಾಂಡಾಗಳಲ್ಲಿ ಸೀತ್ಲಾ ಹಬ್ಬವನ್ನು ಅತಿ ಸರಳವಾಗಿ ಮಂಗಳವಾರ ಆಚರಿಸಲಾಯಿತು.

Advertisement

ಏನೀದು ಸೀತ್ಲಾ ಹಬ್ಬ: ಗೋರ್ ಬಂಜಾರರು ವನವಾಸಿಯಾಗಿದ್ದರು. ಸಹಜವಾಗಿ ಅವರ ಶಕ್ತಿ ದೇವತೆ ಮಾರಿಯಮ್ಮ ತಾಯಿಯ ವಿವಿಧ ಏಳು ಅವತಾರಗಳನ್ನು ಆರಾದಿಸಿ ಪ್ರಾಣಭಿಕ್ಷೆ ಬೇಡುತ್ತಿದ್ದರು. ಆ ಎಲ್ಲಾ ಅವತಾರಗಳ ಒಟ್ಟು ಸೂಚಕ ಪದವೇ ಸೀತ್ಲಾ. ಅದು ಅವರ ಒಂದು ಪ್ರಮುಖ ಹಬ್ಬವಾಗಿ ಮಾರ್ಪಟ್ಟಿತು.

ಇದನ್ನು ಪ್ರತಿವರ್ಷ ಲಂಬಾಣಿ ತಾಂಡಾಗಳಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆ ಆದ ಮೇಲೆ ಅಂದರೆ, ಅಮವಾಸ್ಯೆ ನಂತರ ಬರುವ ಮಂಗಳವಾರದಂದು ಸಂಪ್ರದಾಯದಂತೆ ಆಚರಿಸಿಕೊಂಡು ಬರುವದು ಸಮಾಜದವರ ಪದ್ಧತಿಯಾಗಿದೆ.

ಭೂತ, ಪಿಶಾಚಿ, ಮಾಟ-ಮಂತ್ರಗಳಿಗೆ ಅಪಾರವಾಗಿ ಭಯಪಡುವ ಈ ಜನ, ತಾಂಡದಲ್ಲಿ ಕಾಣಿಸಿಕೊಳ್ಳುವ ಕೆಮ್ಮು, ಜ್ವರ, ಕಾಲರಾ, ಪ್ಲೇಗ್, ಸಿಡುಬು, ಗಂಡಲು ಬೇನೆಗಳಿಗೆ ಕ್ಷುದ್ರ ದೇವತೆಗಳೇ ಕಾರಣವೆಂದು ನಂಬುತ್ತಾರೆ. ಅವುಗಳನ್ನು ತೃಪ್ತಿಪಡಿಸಿದರೆ ಈ ಕಾಯಿಲೆಗಳು ಬರುವುದಿಲ್ಲವೆಂದು ನಂಬುತ್ತಾರೆ. ಈ ದೇವಗತೆಗಳನ್ನು `ವಾಳೆವಂಗೋಳಾರ್ ಭವಾನಿ’ (ಗಾಳಿ ದೇವತೆ) ಎಂದು ಕರೆಯುತ್ತಾರೆ.

ಆಚರಣೆ: ಊರ ಹೊರಗಿನ ಬೇವಿನಮರದ ಬುಡದಲ್ಲಿ ಏಳು ಮಾತೆಯರನ್ನು ಪ್ರತಿಬಿಂಬಿಸುವ ಮರದ ಏಳು ಕೊಂಬೆಯ ತುಂಡುಗಳನ್ನು ಇಲ್ಲವೇ ಏಳು ಕಲ್ಲುಗಳಿಗೆ ಕೆಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡುವುದು. ಮಾತೆಯರ ಪ್ರತಿಬಿಂಬ ಹಿಂದೆ `ಲೂಕಡ್'(ಸೇವಕ)ನನ್ನು ಪ್ರತಿಷ್ಠಾಪಿಸಿರುತ್ತಾರೆ. ಪೂಜೆ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಹಾಗೂ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ. ಗೋರ್ ಬಂಜಾರರು ತಮಗೆ ಹಾಗೂ ತಮ್ಮ ಸಂಪತ್ತಿನ ಸಂಕೇತವಾದ ಪಶುಗಳಿಗೆ ಯಾವುದೇ ರೀತಿಯ ರೋಗ-ರುಜಿನಗಳು ಬಂದು ಪ್ರಾಣ ಹಾನಿಯಾಗದಿರಲೆಂದು ತಮ್ಮ ಕುಲದ ಶಕ್ತಿ ದೇವತೆ ಮರ್ಯಮ್ಮ ತಾಯಿಯ ಸಪ್ತ ಅವತಾರಗಳನ್ನು ಪ್ರತಿನಿದಿಸುವ 7 ಕಲ್ಲುಗಳ ಪೂಜೆ ಮಾಡುತಿತ್ತಾರೆ.

ಸದಾ ಅಲೆಮಾರಿ ಬದುಕನ್ನು ರೂಢಿಸಿಕೊಂಡು ಅದೇ ಶಾಶ್ವತ ಎಂಬಂತೆ, ಪ್ರಕೃತಿ ಮಾತೆಯ ಮಡಿಲಿನಲ್ಲಿ ಬದುಕಿ ಬಾಳಿದ ಬಂಜಾರರು ವಿವಿದ ಋತುವಾರು ಮಳೆಯ ಕುರಿತು, ಗುಡುಗು-ಸಿಡಿಲು, ಸುಂಟರಗಾಳಿ, ಬಿರುಗಾಳಿ, ಕೆರೆಕಟ್ಟೆ ಕೋಡಿ, ವಿವಿಧ ಪ್ರಾಣಿ-ಸಸ್ಯಗಳ ವರ್ತನೆ ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ನಿಸರ್ಗದ ಬಗ್ಗೆ ನಿಷ್ಠೆ, ನಂಬಿಕೆ ವಿಶ್ವಾಸಗಳನ್ನಿಟ್ಟುಕೊಂಡು ಹಬ್ಬ ಹರಿದಿನಗಳ ಮೂಲಕ ಆಚರಣಾ ಪದ್ಧತಿಗಳನ್ನು ಪಾಲಿಸುತ್ತಿದ್ದಾರೆ.

ಬಹುತೇಕ ಎಲ್ಲ ಲಂಬಾಣಿ ತಾಂಡಾಗಳಲ್ಲಿ ಈ ಸೀತ್ಲಾ ಹಬ್ಬವನ್ನು ಆಚರಿಸಲಾಯಿತು. ಕೊಂಡಿಕೊಪ್ಪ ಗ್ರಾಮದ ಆಚರಣೆ ಸಂದರ್ಭದಲ್ಲಿ ಗುರಪ್ಪ ನಾಯಕ, ರಾಮಣ್ಣ ಕಾರಭಾರಿ, ಸೋಮವ್ವ ಲಮಾಣಿ, ಪರಸಪ್ಪ ಲಮಾಣಿ, ಲಕ್ಕವ್ವ ಲಮಾಣಿ, ತುಳಜವ್ವ ಲಮಾಣಿ ಸೇರಿದಂತೆ ಅನೇಕರಿದ್ದರು.

ಸದಾ ಅಲೆಮಾರಿ ಬದುಕನ್ನು ರೂಢಿಸಿಕೊಂಡು ಅದೇ ಶಾಶ್ವತ ಎಂಬಂತೆ, ಪ್ರಕೃತಿ ಮಾತೆಯ ಮಡಿಲಿನಲ್ಲಿ ಬದುಕಿ ಬಾಳಿದ ಬಂಜಾರರು ವಿವಿದ ಋತುವಾರು ಮಳೆಯ ಕುರಿತು, ಗುಡುಗು-ಸಿಡಿಲು, ಸುಂಟರಗಾಳಿ, ಬಿರುಗಾಳಿ, ಕೆರೆಕಟ್ಟೆ ಕೋಡಿ, ವಿವಿಧ ಪ್ರಾಣಿ-ಸಸ್ಯಗಳ ವರ್ತನೆ ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ನಿಸರ್ಗದ ಬಗ್ಗೆ ನಿಷ್ಠೆ, ನಂಬಿಕೆ ವಿಶ್ವಾಸಗಳನ್ನಿಟ್ಟುಕೊಂಡು ಹಬ್ಬ ಹರಿದಿನಗಳ ಮೂಲಕ ಆಚರಣಾ ಪದ್ಧತಿಗಳನ್ನು ಪಾಲಿಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here