ಸಂಸ್ಕೃತಿ, ಜನಪದ ಕಲೆಗಳು ಅಭಿವೃದ್ಧಿಗೆ ಪೂರಕ

0
AA
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವ್ಯಕ್ತಿ ಪರಿಪೂರ್ಣನಾಗಲು ಜ್ಞಾನ ಹಾಗೂ ಇಚ್ಛಾಶಕ್ತಿ ಅತ್ಯಗತ್ಯವಾಗಿದೆ. ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ವಿ.ನಾಡಗೌಡರ್ ಹೇಳಿದರು.

Advertisement

ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಆವರಣದ ಕೌಶಲ್ಯ ವಿಕಾಸ ಭವನದಲ್ಲಿ ಶನಿವಾರ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜರುಗಿದ ಲಾವಣಿ ಹಾಗೂ ಗೀಗಿ ಪದ ಶಿಬಿರದ ಸಮಾರೋಪ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಉದ್ದೇಶ ಗ್ರಾಮೀಣ ಬೇರು ಜಾಗತಿಕ ಮೇರು ಎಂಬುದಾಗಿದೆ. ಗ್ರಾಮೀಣ ಕಲೆಗಳಾದ ಲಾವಣಿ ಪದ ಗೀಗಿ ಪದ ಜನಪದ ಇವೆಲ್ಲವಗಳನ್ನು ಯುವ ಪೀಳಿಗೆಗೆ ಕಲಿಸಿಕೊಡುವ ಪ್ರಯತ್ನ ಸಾಗಿದ್ದು ಉತ್ತಮವಾಗಿದೆ ಎಂದರು.

ನಮ್ಮ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ವಿಕಾಸಕ್ಕೆ ನಮ್ಮ ನಾಡಿನ ಸಂಸ್ಕೃತಿ, ಜನಪದ ಕಲೆಗಳು ಪೂರಕವಾಗಿವೆ. ಗ್ರಾಮೀಣ ಕಲೆ-ಸಂಸ್ಕೃತಿ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಂತಹ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ಸದಾ ಸಹಕಾರ ನೀಡಲಿದೆ ಎಂದು ಹೇಳಿದರು.

ವರ್ತಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮೂಲಕ ಗ್ರಾಮೀಣ ಜನಪದ ಗೀಗೀಪದ ಗೀತೆಗಳನ್ನು ಅಳವಡಿಸಿಕೊಳ್ಳಬೇಕು. ಹೊಸ ಪೀಳಿಗೆಗೆ ಈ ಕುರಿತು ಆಸಕ್ತಿ ಮೂಡಬೇಕೆಂದು ತಿಳಿಸಿದರು.

ಸಂಸ್ಕೃತಿ ಚಿಂತಕ ಡಾ. ಜಿ.ಬಿ. ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ.ಹಿರೇಮಠ ಉಪಸ್ಥಿತರಿದ್ದರು.

ಹಿರಿಯ ಕಲಾವಿದರಾದ ಯಲ್ಲವ್ವ ಸಾಲಿಮನಿ, ಲಕ್ಷ್ಮೀ ಬಾಯಿ ಮಾದರ, ಸಾವಿತ್ರಿಬಾಯಿ ಪೂಜಾರ, ಬಸವರಾಜ್ ಹಡಗಲಿ, ನಿಂಗಪ್ಪ ದಿಂಡೂರ, ವೀರಣ್ಣ ಅಂಗಡಿ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

ಜಾನಪದ ಅಕಾಡೆಮಿ ಸಂಚಾಲಕ ಶಂಕ್ರಣ್ಣ ಸಂಕಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೌನೇಶ್ ಬಡಿಗೇರ ಅತಿಥಿಗಳನ್ನು ಸ್ವಾಗತಿಸಿದರು. ಸಂಜಯ್ ಕುಮಾರ್ ಹಾರೋಬಿಡಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಪ್ಪ ಬಾರಂಗಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಮಾತನಾಡಿ, ಓದಿ ಸಾಧನೆ ಮಾಡಿದವರನ್ನು ನೋಡಿದ್ದೇವೆ. ನಾಡಿನಲ್ಲಿ ಸಾಧನೆ ಮಾಡಿದವರು ನಮ್ಮ ಹಿರಿಯರ ಜನಪದರು. ಹಂತಿ ಪದ, ಗೀಗಿ ಪದ, ಜನಪದ ಉಳಿಸಿ ಬೆಳೆಸುವ ಮೂಲಕ ನಮ್ಮ ನಾಡಿನ ಕಲೆ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಿ ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಆಗಲಿ ಎಂದು ಹೇಳಿದರು.

ಬನಹಟ್ಟಿಯ ಜನಪದ ವಿದ್ವಾಂಸರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ಆರ್. ಪೊಲೀಸ್‌ಪಾಟೀಲ್ ಲಾವಣಿ ಮತ್ತು ಗಿಗಿ ಪದ ಕಲೆಯ ಪ್ರಸ್ತುತ ಕುರಿತಂತೆ ಮಾತನಾಡುತ್ತಾ, ಜೀವನದ ಜೀವ ಜನಪದವಾಗಿದೆ. ವೃತ್ತಿ ಹೊಟ್ಟೆ ತುಂಬಿಸಿದರೆ, ಜನಪದ ನೆತ್ತಿ ತುಂಬಿಸಿತು ಎಂದು ತಮ್ಮ ಅನುಭವ ಹಂಚಿಕೊAಡರು.


Spread the love

LEAVE A REPLY

Please enter your comment!
Please enter your name here