ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಬೀದಿ, ರಸ್ತೆಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಬೀದಿ ನಾಯಿಗಳ ಮತ್ತು ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು, ಎಲ್ಲೆಂದರಲ್ಲಿ ಗುಂಪಾಗಿ ಕಂಡುಬರುತ್ತಿವೆ. ಇದರಿಂದ ವಾಹನ ಸವಾರರು, ವಿದ್ಯಾರ್ಥಿಗಳು ಭಯದಿಂದಲೇ ಸಂಚರಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಡಾಡಿ ದನಗಳು ರಾತ್ರಿ-ಹಗಲೆನ್ನದೇ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಈ ಕುರಿತು ಎಚ್ಚರ ವಹಿಸಬೇಕಾದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ನಗರಸಭೆ ನಿದ್ರೆಗೆ ಜಾರಿದ್ದು, ಬೀದಿ ನಾಯಿಗಳ, ಬಿಡಾಡಿ ದನಗಳನ್ನು ನಿಯಂತ್ರಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತಿದೆ.
ಈಗಲಾದರೂ ಎಚ್ಚೆತ್ತು ಬೀದಿ ನಾಯಿಗಳ ಹಾಗೂ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಅಗತ್ಯವಿರುವ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.