ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ತಾಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರುದ್ರಾಪೂರ ಹಾಗೂ ಕಲ್ಲಿಗನೂರ ರಸ್ತೆ ಮಾರ್ಗವಾಗಿ ಸಂಚರಿಸುವ ಭಾರೀ ಗಾತ್ರದ ಟಿಪ್ಪರ್ ವಾಹನಗಳು ಅಪಾಯಕಾರಿಯಾಗಿ ಹಾಗೂ ಕಾನೂನು ಬಾಹಿರವಾಗಿ ಮರಳು ಮತ್ತು ಮಣ್ಣನ್ನು ಸಾಗಿಸುತ್ತಿದ್ದಾರೆ ಎಂದು ತಾಲೂಕಾ ಎಸ್‌ಎಫ್‌ಐ ಸಂಘಟನೆಯಿಂದ ತಹಸೀಲ್ದಾರ್‌ಗೆ ಮನವಿ ನೀಡಿದರು.
ವಾಹನ ಸವಾರರು ರಾಜಾರೋಷವಾಗಿ ಮಣ್ಣು ಹಾಗೂ ಮರಳನ್ನು ಕಾನೂನು ಬಾಹಿರವಾಗಿ ಹಗಲು ದರೋಡೆ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು, ವಾಹನ ಸಂಚಾರದಿಂದ ರಸ್ತೆ ಹದಗೆಟ್ಟಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಗಜೇಂದ್ರಗಡ ಸಾರಿಗೆ ಘಟಕದ ವ್ಯವಸ್ಥಾಪಕರು ಲಕ್ಕಲಕಟ್ಟಿ ಗ್ರಾ.ಪಂ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ರಸ್ತೆ ಸರಿಯಿಲ್ಲದ ಕಾರಣ ರುದ್ರಾಪೂರ ಮಾರ್ಗಕ್ಕೆ ಬಸ್ ಬಿಡಲು ನಿರಾಕರಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಚಂದ್ರು ರಾಠೋಡ, ಸುದೀಪ್ ಹುಬ್ಬಳ್ಳಿ, ಅನಿಲ ರಾಠೋಡ, ಮಹಾಂತೇಶ ಪೂಜಾರ, ಮುಪ್ಪಯ್ಯ ಬೆಳವನಕಿ, ಸುನೀಲ್ ರಾಠೋಡ ಸೇರಿ ಇತರರು ಇದ್ದರು.