ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನಲ್ಲಿ ಎಂ ಸ್ಯಾಂಡ್, ಖಡಿ ಸಾಗಿಸುವ ಟಿಪ್ಪರ್‌ಗಳ ಹಾವಳಿಯಿಂದ ಜನರು ಬೆಚ್ಚಿ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಇವುಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಸಾರ್ವಜನಿಕರು ಒತ್ತಾಯಿಸುವಂತಾಗಿದೆ.
ತಾಲೂಕಿನಲ್ಲಿ ಇಂತಹ ಟಿಪ್ಪರ್‌ಗಳಿಂದ ಅಗಾಗ ಅಪಘಾತ, ಹಾನಿ, ಸಾವು-ನೋವು ಸಂಭವಿಸತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಮವಾರ ಬೆಳಿಗ್ಗೆ ೧೧ಕ್ಕೆ ಪಟ್ಟಣದ ಸವಣೂರ ರಸ್ತೆಯ ಪೆಟ್ರೋಲ್ ಬಂಕ್ ಬಳಿ ವೇಗವಾಗಿ ಬಂದ ಟಿಪ್ಪರ್ ಒಂದು ಕಾರ್‌ಗೆ ಡಿಕ್ಕಿ ಹೊಡೆದಿದೆ. ಕಾರ್ ಅಲ್ಲಲ್ಲಿ ನುಜ್ಜುಗುಜ್ಜಾಗಿದ್ದು, ಕಾರಿನ ಡ್ರೈವರ್ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಘಟನೆಯಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂದರ್ಭದಲ್ಲಿಯೇ ೩ ಜನ ಪ್ರಯಾಣಿಸುತ್ತಿದ್ದ ಆಲ್ಟೊ ಕಾರಿಗೆ ಮತ್ತೊಂದು ಟಿಪ್ಪರ್ ಡಿಕ್ಕಿ ಹೊಡೆದು ಕಾರು ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರಮಕ್ಕೆ ಮುಂದಾದರು. ಹೆಚ್ಚು ಲಾಭದ ಉದ್ದೇಶದಿಂದ ಟಿಪ್ಪರ್‌ಗಳ ಮಾಲೀಕರು ಮತ್ತು ಡ್ರೈವರ್ ಅಬ್ಬರಕ್ಕೆ ಸಾರ್ವಜನಿಕರು ನಲುಗುತ್ತಿರುವುದು ವಾಸ್ತವ. ಸಾವು-ನೋವು ಸಂಭವಿಸಿ ಅನಾಹುತಕ್ಕೆ ಕಾರಣವಾಗುವ ಮೊದಲೇ ಸಂಬಂಧಪಟ್ಟವರು ಇವುಗಳ ಅಬ್ಬರಕ್ಕೆ ಬ್ರೇಕ್ ಹಾಕಬೇಕು ಎಂದು ಮುಖಂಡ ಪದ್ಮರಾಜ ಪಾಟೀಲ ಮತ್ತು ಸಾರ್ವಜನಿಕರ ಒತ್ತಾಯಿಸಿದ್ದಾರೆ.