ಬೆಂಗಳೂರು;- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಯಿಂದ ಗ್ರಾಹಕರು ಕಣ್ಣೀರಿಡುತ್ತಿದ್ದಾರೆ. ಆದರೆ, ಈರುಳ್ಳಿ ಬೆಳೆದ ರೈತರು ಮಾತ್ರ ಫುಲ್ ಖುಷ್ ಆಗಿದ್ದಾರೆ.
ಟೊಮ್ಯಾಟೋಗೆ ಪರ್ಯಾಯವಾಗಿ ಹುಣಸೆಹಣ್ಣು ಇತ್ತೆಂಬ ಸಮಾಧಾನವಾದರೂ ಇತ್ತು. ಆದರೆ, ಈರುಳ್ಳಿ ವಿಚಾರದಲ್ಲಿ ಹಾಗಲ್ಲ. ಏಕೆಂದರೆ, ಯಾವುದೇ ಅಡುಗೆ ಮಾಡಿದರೂ ಈರುಳ್ಳಿ ಪ್ರಧಾನವಾಗಿ ಬೇಕೇ ಬೇಕು. ಹೀಗಾಗಿ ಗ್ರಾಹಕರು ಬಹಳ ಚಿಂತೆ ಮಾಡುವಂತಾಗಿದೆ.
ಒಂದು ತಿಂಗಳ ಹಿಂದಷ್ಟೇ 100 ರೂಪಾಯಿ 4 ಕೆಜಿ ಈರುಳ್ಳಿ ದೊರೆಯುತ್ತಿತ್ತು. ಆದರೆ, ಕಳೆದೊಂದು ವಾರದಿಂದ ಈರುಳ್ಳಿ ಬೆಲೆ 25 ರೂಪಾಯಿಯಿಂದ ದಿಢೀರ್ 60 ರಿಂದ 70 ರೂ.ಗೆ ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೆಜಿಗೆ 70 ರೂ.ನಂತೆ ಮಾರಾಟವಾಗುತ್ತಿದೆ. ಏಕಾಏಕಿ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದು, ಈರುಳ್ಳಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಈರುಳ್ಳಿ ಬಳಕೆಯನ್ನೇ ತುಸು ಕಡಿಮೆ ಮಾಡಿದ್ದಾರೆ.
ಪ್ರಮುಖವಾಗಿ ಈರುಳ್ಳಿ ಬೆಳೆಯುವಂತಹ ಪ್ರದೇಶಗಳಲ್ಲಿ ಅಕಾಲಿಕ ಮಳೆ, ಅತಿವೃಷ್ಟಿ ಮತ್ತು ಮಳೆಯ ಕೊರತೆ ಹಾಗೂ ಪ್ರತಿಕೂಲ ವಾತಾವರಣದ ಪರಿಣಾಮದಿಂದ ಈರುಳ್ಳಿ ಬೆಳೆ ನಾಶವಾಗಿದ್ದು, ಮಾರುಕಟ್ಟೆಗಳಿಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ದಿಢೀರ್ ಬೆಲೆ ಏರಿಕೆಯು ಗ್ರಾಹಕರಿಗೆ ಮಾತ್ರವಲ್ಲ ವ್ಯಾಪಾರಿಗೂ ಸಂಕಷ್ಟ ತಂದೊಡ್ಡಿದೆ. ಏಕೆಂದರೆ, ಈರುಳ್ಳಿ ಸೇವಿಸುತ್ತಿರುವ ಮತ್ತು ಖರೀದಿಸುತ್ತಿರುವ ಪ್ರಮಾಣ ತೀವ್ರ ಕುಸಿದೆ.
ಅಂದಹಾಗೆ ಮಾರುಕಟ್ಟೆಯಲ್ಲಿ ಮೂರು ವಿಭಿನ್ನ ಗುಣ್ಣಮಟ್ಟದ ಈರುಳ್ಳಿ ದೊರೆಯುತ್ತವೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 70 ರೂ.ನಂತೆ ಮಾರಾಟವಾಗುತ್ತಿದ್ದರೆ, ಸಾಧಾರಣ ಗುಣಮಟ್ಟದ ಈರುಳ್ಳಿ 60 ರೂ.ನಂತೆ ಮಾರಾಟವಾಗುತ್ತಿದೆ. ಕಳಪೆ ಮಟ್ಟದ ಈರುಳ್ಳಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಈರುಳ್ಳಿಯ ಸಗಟು ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಹವಾಮಾನ ವೈಪರೀತ್ಯದಿಂದ ಈರುಳ್ಳಿ ಗುಣಮಟ್ಟವೂ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು. ಮುಂಬರುವ ತಿಂಗಳುಗಳಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.